ADVERTISEMENT

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೈಸೂರು ಸೇರಿ 40 ಸ್ಥಳಗಳಲ್ಲಿ NIA ಶೋಧ

ಪಿಟಿಐ
Published 16 ಫೆಬ್ರುವರಿ 2023, 2:44 IST
Last Updated 16 ಫೆಬ್ರುವರಿ 2023, 2:44 IST
ಕೊಯಮತ್ತೂರಿನಲ್ಲಿ ಎನ್ಐಎ ಬುಧವಾರ ಶೋಧ ಕಾರ್ಯ ಕೈಗೊಂಡಿದ್ದ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು –ಪಿಟಿಐ ಚಿತ್ರ
ಕೊಯಮತ್ತೂರಿನಲ್ಲಿ ಎನ್ಐಎ ಬುಧವಾರ ಶೋಧ ಕಾರ್ಯ ಕೈಗೊಂಡಿದ್ದ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು –ಪಿಟಿಐ ಚಿತ್ರ   

ನವದೆಹಲಿ/ಚೆನ್ನೈ : ಕೊಯಮತ್ತೂರು ಹಾಗೂ ಮಂಗಳೂರಿನಲ್ಲಿ ಸಂಭವಿಸಿದ ಎರಡು ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಒಟ್ಟು 40 ಸ್ಥಳಗಳಲ್ಲಿ ಬುಧವಾರ ಶೋಧ ಕಾರ್ಯ ಕೈಗೊಂಡಿತು.

ಕೊಯಮತ್ತೂರು ಸ್ಫೋಟಕ್ಕೆ ಸಂಬಂಧಿಸಿ 32 ಸ್ಥಳಗಳಲ್ಲಿ ಹಾಗೂ ಮಂಗಳೂರು ಸ್ಫೋಟಕ್ಕೆ ಸಂಬಂಧಿಸಿ ಮೈಸೂರು ಸೇರಿದಂತೆ 8 ಸ್ಥಳಗಳಲ್ಲಿ ಶೋಧ ನಡೆಸಲಾಯಿತು’ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.

‘ಭಾರಿ ಪ್ರಮಾಣದಲ್ಲಿ ಡಿಜಿಟಲ್‌ ಸಾಧನಗಳು, ₹ 4 ಲಕ್ಷ ನಗದು, ಆಧಾರ್‌ ಕಾರ್ಡುಗಳು, ಸಿಮ್‌ಗಳು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಮೈಸೂರಿನಲ್ಲಿ ಒಂದು ಸ್ಥಳ, ಕೇರಳದ ಎರ್ನಾಕುಲಂನಲ್ಲಿ 4, ತಮಿಳುನಾಡಿನ ತಿರುಪ್ಪೂರಿನಲ್ಲಿ 2 ಹಾಗೂ ಕೊಯಮತ್ತೂರಿನ ಒಂದು ಸ್ಥಳದಲ್ಲಿ ಶೋಧ ನಡೆಸಲಾಗಿದೆ.

ಕೊಯಮತ್ತೂರಿನಲ್ಲಿ ಸಂಭವಿಸಿದ್ದ ಕಾರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿ, ಕೊಯಮತ್ತೂರಿನ 14 ಸ್ಥಳಗಳಲ್ಲಿ, ತಿರುಚಿನಾಪಳ್ಳಿ, ತೂತ್ತುಕುಡಿ, ದಿಂಡಿಗಲ್, ಮೈಲಾಡುತುರೈ, ಕೃಷ್ಣಗಿರಿ, ಕನ್ಯಾಕುಮಾರಿ, ತೆಂಕಾಸಿ ಹಾಗೂ ಕೇರಳದ ಎರ್ನಾಕುಲಂನ ತಲಾ ಒಂದು ಸ್ಥಳದಲ್ಲಿ ಶೋಧ ನಡೆದಿದೆ. ತಮಿಳುನಾಡಿನ ನೀಲಗಿರಿಯಲ್ಲಿ 2, ತಿರುನೆಲ್ವೇಲಿ– 3, ಚೆನ್ನೈ–3, ತಿರುವಣ್ಣಾಮಲೈನ 2 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಒದಗಿಸಿದ್ದ ಬಿಗಿ ಭದ್ರತೆ ನಡುವೆ ಬೆಳಿಗ್ಗೆ 5ಕ್ಕೆ ಆರಂಭಗೊಂಡ ಶೋಧ ಕಾರ್ಯ, ಹಲವು ಗಂಟೆಗಳ ವರೆಗೆ ನಡೆಯಿತು.

ತಿರುಚಿರಾಪಳ್ಳಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಯೊಬ್ಬರ ಮನೆಯಲ್ಲಿ ಶೋಧ ನಡೆಯಿತು. ಮೈಲಾಡುತುರೈ
ನಲ್ಲಿ ತಂದೆ ಹಾಗೂ ಪುತ್ರಗೆ ಸಂಬಂಧಿಸಿದ ಮನೆಯಲ್ಲಿ ಶೋಧ ನಡೆಸಲಾಯಿತು. ಈ ಇಬ್ಬರು ಮಸ್ಕತ್‌ನಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಯಮತ್ತೂರು ಸ್ಫೋಟ ಪ್ರಕರಣದ ಶಂಕಿತ ಆರೋಪಿಗಳ ಜೊತೆ ಮಹಿಳೆಯೊಬ್ಬರು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ತೆಂಕಾಸಿಯಲ್ಲಿರುವ ಈ ಮಹಿಳೆ ಮನೆಯಲ್ಲಿಯೂ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.