ಜಮ್ಮು/ ನವದೆಹಲಿ: ಪಾಕಿಸ್ತಾನದಿಂದ ನಿಷೇಧಿತ ಲಷ್ಕರ್–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) 10ನೇ ಆರೋಪಿಯನ್ನು ಪಟ್ಟಿ ಮಾಡಿದೆ.
ಈ ಕುರಿತು 2022ರಲ್ಲಿ ದಾಖಲಿಸಿಕೊಂಡ ಪ್ರಕರಣದ ಕುರಿತು ಎನ್ಐಎ, ಜಮ್ಮುವಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ 10ನೇ ಆರೋಪಿ ಝಾಕೀರ್ ಹುಸೇನ್ ಅಲಿಯಾಸ್ ಸೋನು ಹೆಸರನ್ನು ಸೇರಿಸಿದೆ.
ಪಾಕಿಸ್ತಾನದ ಡ್ರೋನ್‌ಗಳು ತರುವ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸರಕನ್ನು ಸಂಗ್ರಹಿಸಿ, ಅವುಗಳನ್ನು ಪೂರೈಸಲು ಆರೋಪಿ ಹುಸೇನ್ ಎಲ್ಇಟಿ ಉಗ್ರರಿಗೆ ಸಹಕಾರ ನೀಡುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಐಪಿಸಿಯ ವಿವಿಧ ಸೆಕ್ಷನ್‌ಗಳು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಯಡಿ ಈಗಾಗಲೇ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಇತರ ಒಂಬತ್ತು ಆರೋಪಿಗಳ ಹೆಸರನ್ನು ಸೇರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.