ಮುಂಬೈ: ಭಾರತ ವಿರೋಧಿ ಕಾರ್ಯಸೂಚಿಯನ್ನು ಉತ್ತೇಜಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್‌ಐಎ) ಲಿಬಿಯಾ ಮೂಲದ ಐಎಸ್ ಭಯೋತ್ಪಾದಕ ಸೇರಿ ಇಬ್ಬರ ವಿರುದ್ಧ ದೋಷಾರೋಪಪಟ್ಟಿ ದಾಖಲಿಸಿದೆ.
ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪಪಟ್ಟಿಯನ್ನು ಎನ್‌ಐಎ ಸಲ್ಲಿಸಿದೆ. ಭಾರತದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ದುರ್ಬಲ ಮನಸ್ಸಿನ ಯುವಕರನ್ನು ನೇಮಿಸಿಕೊಳ್ಳಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ.
ಫೆಬ್ರುವರಿಯಲ್ಲಿ ಬಂಧಿತನಾಗಿದ್ದ ಮಹಾರಾಷ್ಟ್ರದ ನಿವಾಸಿ ಮೊಹಮ್ಮದ್ ಜೊಹೆಬ್ ಖಾನ್ ಮತ್ತು ಲಿಬಿಯಾ ಮೂಲದ ಮೊಹಮ್ಮದ್ ಶೋಯೆಬ್ ಖಾನ್ ಹೆಸರನ್ನು ಪ್ರಮುಖ ಸಂಚುಕೋರರು ಎಂದು ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಭಾರತದಲ್ಲಿ ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಿತೂರಿ ನಡೆಸಿದ್ದ ಅವರು, ಆ ಬಳಿಕ ಅಫ್ಗಾನಿಸ್ತಾನ ಅಥವಾ ಟರ್ಕಿಗೆ ಪರಾರಿಯಾಗಲು ಯೋಜಿಸಿದ್ದರು. ಐಎಸ್ ಉಗ್ರಗಾಮಿಗಳು ಮತ್ತು ಹಿಂಸಾತ್ಮಕ ಸಿದ್ಧಾಂತದ ಪ್ರಚಾರಕ್ಕೆ ವೆಬ್‌ಸೈಟ್ ಅಭಿವೃದ್ಧಿಪಡಿಸುವಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.
ವೆಬ್‌ಸೈಟ್ ಮೂಲಕ ಜಗತ್ತಿನಾದ್ಯಂತ ಯುವಕರನ್ನು ಐಎಸ್‌ನತ್ತ ಸೆಳೆಯಲು ಅವರು ಯೋಜಿಸಿದ್ದರು. ಮೊಹಮ್ಮದ್ ಶೋಯೆಬ್ ಖಾನ್ ಎಂಬಾತನು ಮೊಹಮ್ಮದ್ ಜೊಹೆಬ್ ಖಾನ್‌ನನ್ನು ನೇಮಿಸಿಕೊಂಡಿದ್ದನು. ಈತನು ವಾಟ್ಸ್‌ಆ್ಯಪ್ ಗ್ರೂಪ್ ಅನ್ನು ರಚಿಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಔರಂಗಾಬಾದ್ ಪ್ರದೇಶದ 50ಕ್ಕೂ ಹೆಚ್ಚು ಯುವಕರನ್ನು ಈ ಗುಂಪಿಗೆ ಸೇರಿಸಿಕೊಳ್ಳಲಾಗಿತ್ತು. ಸ್ಫೋಟಕಗಳ ತಯಾರಿಕೆ ಮತ್ತು ಐಇಡಿ ತಯಾರಿಕೆಗೆ ಸಂಬಂಧಿಸಿದ ವಿಡಿಯೊಗಳನ್ನು ಆರೋಪಿಗಳು ಅದರಲ್ಲಿ ಹಂಚಿಕೊಳ್ಳುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.