ಟೊರಂಟೊ/ನವದೆಹಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇರಬಹುದು ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ‘ಹಲವು ವಾರಗಳ ಹಿಂದೆಯೇ’ ಆ ದೇಶದ ಜೊತೆ ಹಂಚಿಕೊಳ್ಳಲಾಗಿತ್ತು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಈ ಗಂಭೀರ ವಿಷಯದಲ್ಲಿ ಸತ್ಯಾಂಶಗಳನ್ನು ಹೊರತರಲು ಭಾರತವು ಕೆನಡಾಕ್ಕೆ ನೆರವು ನೀಡಲು ಬದ್ಧವಾಗಿರಬೇಕು ಎಂದೂ ಟುಡ್ರೊ ತಿಳಿಸಿದ್ದಾರೆ.
‘ಭಾರತದೊಂದಿಗೆ ನಾವು ನಂಬಲರ್ಹ ಆರೋಪಗಳನ್ನು ಕೆಲ ವಾರಗಳ ಹಿಂದೆಯೇ ಹಂಚಿಕೊಂಡಿದ್ದೇವೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18ರಂದು ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತದ ಪ್ರಬಲ ಪಾತ್ರವಿರುವುದಾಗಿ ಟ್ರುಡೊ ಆರೋಪಿದ್ದಾರೆ. ಇದರಿಂದಾಗಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ.
ಕೆನಡಾಕ್ಕೆ ಪರಾರಿಯಾಗಿದ್ದ:
ಈ ಮಧ್ಯೆ, ನಿಜ್ಜರ್ ಒಬ್ಬ ಉಗ್ರ. ಆತ ಉಗ್ರರಿಗೆ ತರಬೇತಿ ಶಿಬಿರ ನಡೆಸುತ್ತಿದ್ದ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಎಂದು ಮೂಲಗಳು ಹೇಳಿವೆ.
ನಿಜ್ಜರ್ ಧಾರ್ಮಿಕ ನಾಯಕನಲ್ಲ ಅಥವಾ ಸಾಮಾಜಿಕವಾಗಿ ಹೆಸರು ಗಳಿಸಿದ ವ್ಯಕ್ತಿಯಲ್ಲ. 1980ರ ದಶಕದ ಕೊನೆಯಲ್ಲಿ ಮತ್ತು 1990ರ ಆರಂಭದಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ 200 ಜನರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗುರ್ದೀಪ್ ಸಿಂಗ್ ಅಲಿಯಾಸ್ ದೀಪಾ ಹೆರನ್‌ವಾಲಾನ ಆಪ್ತ ಸಹಚರ. ಹೆರನ್‌ವಾಲಾ ನಿಷೇಧಿತ ಖಾಲಿಸ್ತಾನ್ ಕಮಾಂಡೊ ಪಡೆಗೆ ಸೇರಿದ್ದ.
ಭಾರತದಲ್ಲಿ ಪೊಲೀಸರು ಬಂಧಿಸುವರೆಂದು ಹೆದರಿ ನಿಜ್ಜರ್ 1996ರಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ. ಉಗ್ರರ ಚಟುವಟಿಕೆಗಳಿಗೆ ಹಣ ಒದಗಿಸಲು ಮಾದಕ ವಸ್ತು ಸಾಗಣೆ, ಸುಲಿಗೆಯಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಮೂಲಗಳು ವಿವರಿಸಿವೆ.
ಭಾರತದಲ್ಲಿ ದಾಳಿಗಳನ್ನು ನಡೆಸಲು ಆತ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಉಗ್ರರ ತರಬೇತಿ ಶಿಬಿರ ನಡೆಸುತ್ತಿದ್ದ. ವರ್ಷದ ಹಿಂದೆ ನಿಷೇಧಿತ ಖಾಲಿಸ್ತಾನ್ ಟೈಗರ್ ಪಡೆ ಅಥವಾ ಕೆಟಿಎಫ್‌ನ ಕಾರ್ಯಾಚರಣೆ ಮುಖ್ಯಸ್ಥನಾಗಿದ್ದ. ಕೆಟಿಎಫ್ ಸದಸ್ಯರಿಗೆ ತರಬೇತಿ, ಆರ್ಥಿಕ ನೆರವು ನೀಡುವಲ್ಲಿ ಈತನ ಪಾತ್ರವಿದೆ ಎಂದು ಸರ್ಕಾರ 2020ರಲ್ಲಿ ಆರೋಪಿಸಿತ್ತು.
2012ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿ ನಿಷೇಧಿತ ಉಗ್ರರ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥ ಜಗತಾರ್ ಸಿಂಗ್ ತಾರಾನ ಸಂಪರ್ಕಕ್ಕೆ ಬಂದಿದ್ದ. ತಾರಾ ಈತನಿಗೆ ಶಸ್ತ್ರಾಸ್ತ್ರ ಪೂರೈಸಿದ್ದಲ್ಲದೆ 2012 ಮತ್ತು 2013ರಲ್ಲಿ ತರಬೇತಿಯನ್ನೂ ನೀಡಿದ್ದ. ನಿಜ್ಞರ್‌ಗೆ ಜಿಪಿಎಸ್ ಸಾಧನ ಬಳಕೆ ಬಗ್ಗೆ ತರಬೇತಿ ನೀಡಲು ಅಮೆರಿಕ ಮೂಲದ ಹರ್ಜೊತ್ ಸಿಂಗ್‌ನನ್ನು ಕೆನಡಾಕ್ಕೆ ಕಳುಹಿಸಲಾಗಿತ್ತು. ನಿಜ್ಜರ್ ಕೂಡ ತಾರಾನಿಗೆ ₹ 2.90 ಲಕ್ಷ ಹಣ ರವಾನಿಸಿದ್ದ ಎಂದು ಮೂಲಗಳು ತಿಳಿಸಿವೆ.
ಈತನ ಅಣತಿಯಂತೆ ನಿಜ್ಜರ್ 2014ರಲ್ಲಿ ಹರಿಯಾಣದ ಸಿರ್ಸಾದಲ್ಲಿನ ಡೇರಾ ಸಚ್ಚಾ ಸೌದಾದ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಲು ಯೋಜಿಸಿದ್ದ. ಆದರೆ ಆತನಿಗೆ ಭಾರತದ ವೀಸಾ ಸಿಗದ ಕಾರಣ ಇದು ಸಾಧ್ಯವಾಗಿರಲಿಲ್ಲ ಎಂದು ಹೇಳಿವೆ.
ಈತನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದ ಎನ್‌ಐಎ, ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸನ್ನೂ ನೀಡಿತ್ತು. ಕೆನಡಾದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಮಾಡಿದ್ದ ಮತ್ತು ಭಾರತದ ರಾಜತಾಂತ್ರಿಕರಿಗೆ ಬೆದರಿಕೆ ಒಡ್ಡಿದ್ದ ಎಂದು ಮೂಲಗಳು ತಿಳಿಸಿವೆ.
Quote - ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಮಾಡಲು ‘ಫೈವ್ ಐಸ್ ಇಟೆಲಿಜೆನ್ಸ್ ನೆಟ್‌ವರ್ಕ್’ ಸಂಸ್ಥೆ ನೀಡಿದ್ದ ಗುಪ್ತಚರ ಮಾಹಿತಿಯೇ ಕಾರಣ– ಡೇವಿಡ್ ಕೋಹೆನ್, ಕೆನಡಾದ ಅಮೆರಿಕ ರಾಯಭಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.