ನವದೆಹಲಿ/ಚಂಡೀಗಢ: ಕೆನಡಾದಲ್ಲಿ ನೆಲೆಯಾಗಿರುವ ಘೋಷಿತ ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಅವರ ಸುತ್ತಲಿನ ಕುಣಿಕೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಇನ್ನಷ್ಟು ಬಿಗಿಗೊಳಿಸುವ ಕ್ರಮ ಕೈಗೊಂಡಿದೆ. ನಿಷೇಧಿತ ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸಂಘಟನೆಯ ಮುಖ್ಯಸ್ಥನಾಗಿರುವ ಪನ್ನೂಗೆ ಸೇರಿದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ.
ಪನ್ನೂ ವಿರುದ್ಧ ಕಾರ್ಯಾಚರಣೆ ನಡೆಸಿದ ಎನ್‌ಐಎ, ಪಂಜಾಬ್‌ನ ಚಂಡೀಗಢದಲ್ಲಿರುವ ಆತನ ಮನೆ, ಅಮೃತಸರದಲ್ಲಿರುವ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.
ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸರ್ಕಾರದ ಅಧಿಕಾರಿಗಳಿಗೆ ಸಾರ್ವಜನಿಕ ವೇದಿಕೆಯಿಂದಲೇ ಈತ ಇತ್ತೀಚೆಗೆ ಬೆದರಿಕೆ ಹಾಕಿದ್ದ. ಕೆನಡಾದಲ್ಲಿರುವ ಹಿಂದೂಗಳು ದೇಶ ತೊರೆಯುವಂತೆಯೂ ಬೆದರಿಕೆಯೊಡ್ಡಿದ್ದ.
ಪಂಜಾಬ್‌ನಲ್ಲಿ ಈತನ ವಿರುದ್ಧ ದೇಶದ್ರೋಹದ ಮೂರು ಪ್ರಕರಣಗಳು ಸೇರಿದಂತೆ 22 ಕ್ರಿಮಿನಲ್ ಪ್ರಕರಣಗಳಿವೆ.
ಕೋರ್ಟ್ ಆದೇಶ: ಮೊಹಾಲಿಯ ಎಸ್.ಎಸ್. ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಹೊರಡಿಸಿದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಕೆನಡಾ ಸೇರಿದಂತೆ ವಿವಿಧ ದೇಶಗಳಲ್ಲಿ ಸಕ್ರಿಯರಾಗಿದ್ದ ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ವಿರುದ್ಧ ಭಾರತ ಕೈಗೊಂಡಿರುವ ಕಾರ್ಯಾಚರಣೆಗೆ ಈ ಕ್ರಮ ಭಾರಿ ಉತ್ತೇಜನ ನೀಡಿದೆ ಎಂದು ವಕ್ತಾರ ಹೇಳಿದ್ದಾರೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ, ಅಮೃತಸರದಲ್ಲಿರುವ ಖಾನ್‌ಕೋಟ್ ಗ್ರಾಮದ 5.7 ಎಕರೆ ಕೃಷಿಭೂಮಿ ಮತ್ತು ಚಂಡೀಗಢದ ಸೆಕ್ಟರ್ 15/ಸಿ ಪ್ರದೇಶದಲ್ಲಿ ಮನೆಯ ನಾಲ್ಕನೇ ಒಂದು ಭಾಗ ಸೇರಿದೆ ಎಂದಿದ್ದಾರೆ.
ಈ ಹಿಂದೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಈಗ ಇವನ್ನು ನ್ಯಾಯಾಲಯದ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 2020ರ ಏ. 5ರಂದು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಾಗಿತ್ತು ಎಂದೂ ಅವರು ವಿವರಿಸಿದ್ದಾರೆ.
ಇದೇ ಮೊದಲು: ತಲೆಮರೆಸಿಕೊಂಡಿರುವ ಆರೋಪಿಯ ಆಸ್ತಿಯನ್ನು ಯುಎಪಿಎಯ 33 (5) ಸೆಕ್ಷನ್‌ನಡಿ ಎನ್‌ಐಎ ಇದೇ ಮೊದಲ ಬಾರಿಗೆ ಮುಟ್ಟುಗೋಲು ಹಾಕಿಕೊಂಡಿದೆ.
ಮೊದಲಿಗೆ ಈ ಪ್ರಕರಣವು 2018ರ ಅ. 19ರಂದು ಅಮೃತಸರದ ಸುಲ್ತಾನ್‌ವಿಂಡಿ ಪೊಲೀಸ್‌ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ದಾಖಲಾಗಿತ್ತು. ನಂತರ ಇದನ್ನು ಎನ್‌ಐಎಗೆ ವರ್ಗಾಯಿಸಲಾಯಿತು. ಈವರೆಗೆ ಪನ್ನೂ ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.