ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವ್ಯಕ್ತಿಗಳ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ತೆಹ್ರಿಕ್–ಉಲ್ –ಮುಜಾಹಿದ್ದೀನ್(ಟಿಯುಎಂ) ಸಂಘಟನೆಯ ಏಳು ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಂಘಟನೆಗೆ ಸೇರಿದ ಮೊಹಮ್ಮದ್ ಮುಸ್ತಫಾ ಖಾನ್, ಮೊಹಮ್ಮದ್ ಯಸೀನ್, ಮೊಹಮ್ಮದ್ ಫಾರೂಕ್, ಮೊಹಮ್ಮದ್ ಇಬ್ರಾರ್, ಮೊಹಮ್ಮದ್ ಜಾವಿದ್ ಖಾನ್, ಶೇರ್ ಅಲಿ (ಕುವೈತ್ ಮೂಲದವರು) ಮತ್ತು ಮೊಹಮ್ಮದ್ ರಫೀಕ್ ನಾಯ್ ಅಲಿಯಾಸ್ ಸುಲ್ತಾನ್ (ಪಿಒಕೆ ಮೂಲದ) ವಿರುದ್ಧ ಗುರುವಾರ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಥವಾ ದೇಶದ್ರೋಹ ಕಾಯ್ದೆ ವಿವಿಧ ವಿಭಾಗಗಳ ಅಡಿಯಲ್ಲಿ ಇವರೆಲ್ಲರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಪೊಲೀಸರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ತೆಹ್ರಿಕ್ ಸಂಘಟನೆಗೆ ಸೇರಿದ ಮೊಹಮ್ಮದ್ ಮುಸ್ತಫಾ ಖಾನ್ ಬಂಧಿಸಿ, ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದರು. ನಂತರ, ಈ ವರ್ಷದ ಮಾರ್ಚ್‌ನಲ್ಲಿ ಎನ್ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು.
ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ ಏಳು ಮಂದಿ ಆರೋಪಿಗಳು ‘ಪಾಕಿಸ್ತಾನ ಮೂಲದ ತೆಹ್ರಿಕ್ ಉಲ್ ಮಜಾಹಿದ್ದೀನ್ ಸಂಘಟನೆಯ ಹ್ಯಾಂಡ್ಲರ್‌ಗಳು ಮತ್ತು ಪೂಂಚ್ ಮತ್ತು ಕುವೈತ್ ಮೂಲದ ಭಯೋತ್ಪಾದಕ ಸಹಚರರು ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಯುದ್ಧ ಮಾಡಲು ಆಳವಾಗಿ ಬೇರೂರಿರುವ ಕ್ರಿಮಿನಲ್ ಪಿತೂರಿಯ ಭಾಗವಾಗಿದೆ ಎಂದು ಎನ್ಐಎ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.