ನವದೆಹಲಿ: ಭಾರತದಲ್ಲಿ ಯುವಕರನ್ನು ನಿಷೇಧಿತ ಇಸ್ಲಾಮಿಕ್ ಸ್ಟೇಟ್(ಐಎಸ್) ಭಯೋತ್ಪಾದಕ ಗುಂಪಿಗೆ ಸೇರಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಹಾರದ ಪಾಟ್ನಾ ನಿವಾಸಿ ಮೊಹಮ್ಮದ್ ಮೊಹ್ಸಿನ್ ಅಹ್ಮದ್ ವಿರುದ್ಧ ಪಟಿಯಾಲದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಐಸಿಸ್ ತನ್ನ ಸಿದ್ಧಾಂತದ ಪ್ರಚಾರಕ್ಕಾಗಿ ಮತ್ತು ಸಂಘಟನೆಗೆ ನಿಧಿ ಸಂಗ್ರಹಿಸಲು ರೂಪಿಸಿದ ಸಂಚಿಗೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್ 25 ರಂದು ಎನ್‌ಐಎ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು ಎಂದು ಅವರು ತಿಳಿಸಿದರು.
ಐಸಿಸ್‌ಗಾಗಿ ಹಣವನ್ನು ಸಂಗ್ರಹಿಸಿ ಮತ್ತು ಆ ಹಣವನ್ನು ಕ್ರಿಪ್ಟೋ ಕರೆನ್ಸಿ ಚಾನೆಲ್‌ಗಳ ಮೂಲಕ ಸಿರಿಯಾ ಮೂಲದ ಐಸಿಸ್ ಪ್ರತಿನಿಧಿಗಳಿಗೆ ಕಳುಹಿಸಿರುವುದಾಗಿ ಅಹ್ಮದ್ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಿದ್ಧಪಡಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.