ADVERTISEMENT

ಮಾನವ ಕಳ್ಳಸಾಗಣೆ: ಇಬ್ಬರ ಬಂಧಿಸಲು ಎನ್‌ಐಎಗೆ ಅನುಮತಿ

ಪಿಟಿಐ
Published 3 ಜೂನ್ 2024, 16:04 IST
Last Updated 3 ಜೂನ್ 2024, 16:04 IST
ಎನ್‌ಐಎ
ಎನ್‌ಐಎ   

ಮುಂಬೈ: ಉದ್ಯೋಗದ ಆಮಿಷವೊಡ್ಡಿ ಕಾಂಬೋಡಿಯಾ, ಥಾಯ್ಲೆಂಡ್‌ಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪವುಳ್ಳ ಇಬ್ಬರನ್ನು ಬಂಧಿಸಲು ಇಲ್ಲಿನ ವಿಶೇಷ ಕೋರ್ಟ್‌, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅನುಮತಿ ನೀಡಿದೆ.

ಹೆಚ್ಚಿನ ಸಂಬಳವುಳ್ಳ ಉದ್ಯೋಗದ ಆಮಿಷದಡಿ ಈ ದೇಶಗಳಿಗೆ ಕಳುಹಿಸುತ್ತಿದ್ದ 20–45 ವರ್ಷದ ಪುರುಷರಿಗೆ ಅಲ್ಲಿ ಜೀತದಾಳುಗಳಾಗಿ ದುಡಿಸಲಾಗುತ್ತಿತ್ತು ಎಂದು ಎನ್‌ಐಎ ಹೇಳಿದೆ.

ಆರೋಪಿಗಳಾದ ಜೆರ‍್ರಿ ಫಿಲಿಪ್ಸ್ ಜಾಕೊಬ್ (46) ಮತ್ತು ಗೊಡಾಫಿ ಅಲ್ವರೆಜ್ (39) ಅವರನ್ನು ಮುಂಬೈನ ಪೊಲೀಸರು ಇದೇ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ನಲ್ಲಿ ಬಂಧಿಸಿದ್ದರು. ಸದ್ಯ, ಈ ಇಬ್ಬರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ADVERTISEMENT

ಇವರನ್ನು ಬಂಧಿಸಲು ಎನ್‌ಐಎ ಅನುಮತಿ ಕೋರಿತ್ತು. ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಎ.ಕೆ.ಲಹೋಟಿ ಅವರು ಇದಕ್ಕೆ ಸ್ಪಂದಿಸಿದರು. ಆದರೆ, ಈ ಇಬ್ಬರನ್ನೂ ವಿಚಾರಣೆಗೆ ವಶಕ್ಕೆ ನೀಡಬೇಕು ಎಂಬ ಬೇಡಿಕೆ ಕುರಿತ ಆದೇಶವನ್ನು ಕಾಯ್ದಿರಿಸಿದರು.

ಎನ್‌ಐಎ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಸಂದೀಪ್‌ ಸದಾವರ್ತೆ ಅವರು, ‘ಪ್ರಕರಣದ ಗಂಭೀರತೆ ಅರಿತು ಎನ್‌ಐಎ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ. ಪೊಲೀಸರ ತನಿಖಾ ವ್ಯಾಪ್ತಿ ಕೇವಲ ದೇಶದ ಗಡಿಯೊಳಗೆ ಇರುತ್ತದೆ’ ಎಂದು ತಿಳಿಸಿದರು.

ಪರ ಹಾಗೂ ವಿರೋಧದ ವಾದ ಆಲಿಸಿದ ಕೋರ್ಟ್‌, ಈ ಕುರಿತ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿತು. ಆರೋಪಿಗಳಿಬ್ಬರ ವಿರುದ್ಧ ಐಪಿಸಿ ಸೆಕ್ಷನ್‌ 370 ಅನ್ವಯ (ಮಾನವ ಕಳ್ಳಸಾಗಣೆ) ಮತ್ತು ಇತರೆ ಆರೋಪ ಕುರಿತಂತೆ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.