ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸಿದ ಆರೋಪದ ಕುರಿತು ಕಾಶ್ಮೀರದ ಮಾನವ ಹಕ್ಕು ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ಮುಂದುವರೆಸಿರುವ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಗುರುವಾರ ಎರಡು ಪ್ರತ್ಯೇಕ ಕಡೆ ಶೋಧ ಕಾರ್ಯಾಚರಣೆ ನಡೆಸಿದೆ.
ಶ್ರೀನಗರದ ಕಾಂತಬಾಘ್‌ನ ಕ್ರಾಲ್‌ಪೋರಾ ಪ್ರದೇಶದಲ್ಲಿರುವ ಮಾನವ ಹಕ್ಕು ಕಾರ್ಯಕರ್ತ, ವಕೀಲ ಪರ್ವೇಜ್ ಇಮ್ರೋಜ್ ಅವರ ನಿವಾಸ, ಶೋಫಿಯಾನ್ ಜಿಲ್ಲೆಯ ವಾಚಿ ಪ್ರದೇಶದಲ್ಲಿರುವ ಖಾಸಗಿ ಶಾಲಾ ಶಿಕ್ಷಕ ಹಾಗೂ ನಿಷೇಧಿತ ಜಮಾತೆ–ಇ–ಇಸ್ಲಾಮಿ (ಜೆಇಐ) ಕಾರ್ಯಕರ್ತ ಮೊಹಮ್ಮದ್ ಶಫಿ ಶಾ, ಖಾಸಗಿ ಸಂಸ್ಥೆಯ ನೌಕರ ಶಾಹೀದ್ ಅಹಮದ್ ಶಾ, ಸರ್ಕಾರಿ ನೌಕರ ರಿಯಾಜ್ ಅಹಮದ್ ಮಿರ್, ಮಸೀದಿಗಳ ನಿರ್ವಹಣಾ ಸಮಿತಿ(ಅವ್ಕಾಫ್)ಯೊಂದರ ಅಧ್ಯಕ್ಷ ಮೊಹಮ್ಮದ್ ಶಬಾನ್ ಕುಮಾರ್, ಬಡಗಿ ಮೊಹಮ್ಮದ್ ಲತೀಫ್ ಶಾ ಅವರ ನಿವಾಸಗಳ ಶೋಧ ಕಾರ್ಯ ನಡೆಸಿದೆ.
ವಕೀಲ ಪರ್ವೇಜ್ ಇಮ್ರೋಜ್ ಅವರು ಮಾನವ ಹಕ್ಕುಗಳ ಕಾರ್ಯಕರ್ತ ಕುರ‍್ರಾಂ ಪರ್ವೇಜ್ ಅವರ ಚಿಕ್ಕಪ್ಪ. ಕುರ‍್ರಾಂ ಪರ್ವೇಜ್ ಅವರನ್ನು ಸೋಮವಾರ (ನ.22) ಎನ್‌ಐಎ ಬಂಧಿಸಿದ್ದು, ಕುರ‍್ರಾಂ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಮರಣದಂಡನೆಗೆ ಗುರಿಮಾಡುವ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಕಲಂನಡಿ ಪ್ರಕರಣ ದಾಖಲಿಸಿದೆ.
ಶೋಧ ಕಾರ್ಯಾಚರಣೆ ವೇಳೆ ಸ್ಥಳೀಯ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಭದ್ರತಾಪಡೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದರು.
ಜಮ್ಮು ಕಾಶ್ಮೀರದ ನಾಗರಿಕ ಒಕ್ಕೂಟವೊಂದರ ಸಂಯೋಜಕರಾಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಕುರ‍್ರಾಂ ಪರ್ವೇಜ್ ಅವರ ಬಂಧನಕ್ಕೆ ದೇಶದ ವಿವಿಧ ಭಾಗಗಳಿಂದ ಖಂಡನೆ ವ್ಯಕ್ತವಾಗಿದ್ದು, ಅವರ ಬಿಡುಗಡೆಗೆ ಒತ್ತಾಯಿಸಿ ಅಭಿಯಾನ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.