ADVERTISEMENT

ಜಮ್ಮು: ಅವಳಿ ಬಾಂಬ್‌ ಸ್ಫೋಟ ಪ್ರದೇಶಕ್ಕೆ ಎನ್‌ಐಎ ಭೇಟಿ

ಪಿಟಿಐ
Published 22 ಜನವರಿ 2023, 11:12 IST
Last Updated 22 ಜನವರಿ 2023, 11:12 IST
   

ಜಮ್ಮು: ಇಲ್ಲಿನ ನರ್ವಾಲ್‌ ಪ್ರದೇಶದಲ್ಲಿ ಶನಿವಾರ ಅವಳಿ ಬಾಂಬ್‌ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭಾನುವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿತು ಎಂದು ಅಧಿಕಾರಿಗಳು ತಿಳಿಸಿದರು.

‘ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡು ಸಮಗ್ರ ತನಿಖೆ ನಡೆಸುವ ಸಾಧ್ಯತೆ ಇದೆ’ ಎಂದು ಸಹ ಅವರು ಹೇಳಿದರು.

ಶನಿವಾರ ನರ್ವಾಲ್‌ ಹೊರವಲಯದಲ್ಲಿ ಕಾರಿನ ರಿಪೇರಿ ಅಂಗಡಿಯಲ್ಲಿ ನಿಲ್ಲಿಸಿದ್ದ ಎಸ್‌ಯುವಿಯಲ್ಲಿ ಹಾಗೂ ಸಮೀಪದ ಇನ್ನೊಂದು ವಾಹನದಲ್ಲಿ ಅವಳಿ ಸ್ಫೋಟಗಳು ಸಂಭವಿಸಿದ್ದು, 9 ಮಂದಿ ಗಾಯಗೊಂಡಿದ್ದರು. ದಾಳಿಗೆ ಸುಧಾರಿತ ಸ್ಫೋಟಕಗಳನ್ನು ಬಳಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಮ್ಮು–ಕಾಶ್ಮೀರದಾದ್ಯಂತ ಬಿಗಿ ಭದ್ರತೆ:

ಅವಳಿ ಸ್ಫೋಟ ಬೆನ್ನಲ್ಲೇ ಜಮ್ಮು–ಕಾಶ್ಮೀರದಾದ್ಯಂತ ಬಹುಸ್ತರದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ.26ರ ಗಣರಾಜ್ಯೋತ್ಸವ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆ ಹಾಗೂ ಅದರ ಸಮಾರೋಪ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗಳನ್ನು (ಸಿಆರ್‌ಪಿಎಫ್‌) ನಿಯೋಜಿಸಲಾಗಿದೆ. ಶ್ರೀನಗರ ಮತ್ತಿತರ ಜಿಲ್ಲೆಗಳ ಎಲ್ಲಾ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸರಿಪಡಿಸಲಾಗಿದೆ. ಪೊಲೀಸ್‌ ನಿಯಂತ್ರಣ ಕೊಠಡಿಗಳ ಮೂಲಕ ವಾಹನಗಳು ಮತ್ತು ಪಾದಚಾರಿಗಳ ಚಲನವನಗಳ ಮೇಲೆ ಕಣ್ಣಿಡಲಾಗುತ್ತಿದೆ ಎಂದು ತಿಳಿಸಿದರು.

‘ಗುಡ್ಡಗಾಡು ಭೂಪ್ರದೇಶದ ಲಾಭ ಪಡೆದು ಭಾರತ ಜೋಡೊ ಯಾತ್ರೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಲು ಪ್ರಯತ್ನಿಸುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ವಹಿಸಲಾಗಿದೆ. ಶ್ರೀನಗರ ಮತ್ತು ಜಮ್ಮುವಿನಲ್ಲಿ ಡ್ರೋನ್‌ ಮೂಲಕ ಕಣ್ಗಾವಲಿಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.