ADVERTISEMENT

ಹಳಿಗಳಲ್ಲಿ ಪರಿಕರಗಳಿಟ್ಟು ವಿಧ್ವಂಸಕ ಕೃತ್ಯಕ್ಕೆ ಯತ್ನ: ಕಠಿಣ ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:25 IST
Last Updated 24 ಸೆಪ್ಟೆಂಬರ್ 2024, 16:25 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ರೈಲು ಹಳಿತಪ್ಪುವಂತೆ ಹಳಿಗಳ ಮೇಲೆ ವಿವಿಧ ಪರಿಕರಗಳನ್ನು ಇರಿಸುವ ವಿಧ್ವಂಸಕ ಕೃತ್ಯಗಳ ಕುರಿತಂತೆ ರೈಲ್ವೆ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈ ಕುರಿತ ತನಿಖೆಗೆ ಎನ್‌ಐಎ ಮತ್ತು ಎಲ್ಲ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿದೆ.

‘ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಲಾಖೆಯು ಸೂಕ್ಷ್ಮವಾಗಿ ಪರಿಸ್ಥಿತಿ ಅವಲೋಕಿಸುತ್ತಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ಮೇಲೆ ಕಠಿಣ ಕ್ರಮಜರುಗಿಸಲಾಗುವುದು’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಜೈಪುರ್‌ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಇಂತಹ ಕೃತ್ಯಗಳ ಮೂಲ ಪತ್ತೆಗೆ ಇಲಾಖೆಯ ಎಲ್ಲ ವಿಭಾಗಗಳು, ಆರ್‌ಪಿಎಫ್‌ಗೆ ಸೂಚಿಸಲಾಗಿದೆ. ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮಜರುಗಿಸಲಾಗುವುದು. ಇಂತಹ ಘಟನೆ ಪುನರಾವರ್ತನೆ ಅಗದಂತೆ ರೈಲ್ವೆ ಆಡಳಿತವು ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕಳೆದ ಒಂದು ತಿಂಗಳಲ್ಲಿ ರೈಲು ಹಳಿಗಳ ಮೇಲೆ ಅಡುಗೆ ಅನಿಲ ಸಿಲಿಂಡರ್, ದೊಡ್ಡ ಕಲ್ಲು ಅಥವಾ ಕಬ್ಬಿಣದ ತುಂಡುಗಳನ್ನು ಇರಿಸಿರುವ, ಇದರಿಂದ ರೈಲ್ವೆ ನಿರ್ವಹಣೆಗೆ ತೀವ್ರ ತೊಡಕು ಉಂಟಾಗಿರುವ ಸುಮಾರು 20 ಪ್ರಕರಣಗಳು ವರದಿಯಾಗಿವೆ.

ಇಂತಹ ಕೃತ್ಯಗಳನ್ನು ಉಲ್ಲೇಖಿಸಿದ್ದ ಗೃಹ ಸಚಿವ ಅಮಿತ್ ಶಾ ಅವರು ಈಚೆಗೆ, ‘ಸರ್ಕಾರಕ್ಕೆ ಇಂತಹ ವಿಧ್ವಂಸಕ ಕೃತ್ಯಗಳ ಕುರಿತು ಮಾಹಿತಿ ಇದೆ. ವಿವಿಧ ಸಂಸ್ಥೆಗಳು ಈ ಸಂಬಂಧ ತನಿಖೆಯನ್ನು ನಡೆಸುತ್ತಿವೆ’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.