ನವದೆಹಲಿ: ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹25 ಕೋಟಿ ಮೌಲ್ಯದ ಕೊಕೇನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 7ರಂದು ಆರೋಪಿಯು ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ. ತನಿಖೆಯ ವೇಳೆ ಪ್ರಯಾಣಿಕನು ತಾನು ಮಾದಕ ಪದಾರ್ಥಗಳನ್ನು ಹೊಂದಿರುವ ಮಾತ್ರೆಗಳನ್ನು ನುಂಗಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಕಸ್ಟಮ್ಸ್ ಇಲಾಖೆ ಹೊರಡಿಸಿದ ಹೇಳಿಕೆ ತಿಳಿಸಿದೆ.
‘ದೇಹದೊಳಗೆ ಮಾತ್ರೆಗಳಿದ್ದು, ಅವುಗಳನ್ನು ಹೊರತೆಗೆಯಲು ವೈದ್ಯಕೀಯ ಪರೀಕ್ಷೆ ನಡೆಸಲು ಆತ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಆತನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಮತ್ತೆ 56 ಮಾತ್ರೆಗಳನ್ನು ಹೊರತೆಗೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾತ್ರೆಗಳನ್ನು ಕತ್ತರಿಸಿದಾಗ ಸುಮಾರು 1,660 ಗ್ರಾಂ ತೂಕದ ಮಾದಕ ವಸ್ತು ಎಂದು ಶಂಕಿಸಲಾದ ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ. ಬಳಿಕ ಆ ಪುಡಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊಕೇನ್ ಎಂಬುದು ಧೃಢಪಟ್ಟಿದೆ. ಇದರ ಮೌಲ್ಯ ₹24.90 ಕೋಟಿ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.