ADVERTISEMENT

ನಿಕಿತಾ ಜೇಕಬ್‌ಗೆ ಮುಂಬೈ ನ್ಯಾಯಾಲಯದಿಂದ ತಾತ್ಕಾಲಿಕ ಜಾಮೀನು ಮಂಜೂರು

ರಾಯಿಟರ್ಸ್
Published 17 ಫೆಬ್ರುವರಿ 2021, 12:32 IST
Last Updated 17 ಫೆಬ್ರುವರಿ 2021, 12:32 IST
ನಿಕಿತಾ ಜೇಕಬ್‌
ನಿಕಿತಾ ಜೇಕಬ್‌   

ಮುಂಬೈ: ರೈತರ ಪ್ರತಿಭಟನೆ ಸಂಬಂಧಿತ ಟೂಲ್ ಕಿಟ್ ರಚನೆ ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ 22 ವರ್ಷದ ಮುಂಬೈ ಮೂಲದ ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್ ಅವರಿಗೆ ಮುಂಬೈ ನ್ಯಾಯಾಲಯ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

ನಿಕಿತಾಗೆೆ ಬಂಧನದಿಿಂದ ಮೂರು ವಾರ ತಾತ್ಕಾಲಿಕ ರಕ್ಷಣೆ ನೀಡಿರುವ ನ್ಯಯಾಲಯ, ಈ ಕುರಿತಂತೆ ಮೂರು ವಾರಗಳಲ್ಲಿ ದೆಹಲಿಯಲ್ಲಿರುವ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿದೆ. ಅರ್ಜಿದಾರರು (ಜೇಕಬ್) ಮುಂಬೈನ ಖಾಯಂ ನಿವಾಸಿಯಾಗಿದ್ದು, ಎಫ್‌ಐಆರ್ ದೆಹಲಿಯಲ್ಲಿ ದಾಖಲಾಗಿದೆ, ಮತ್ತು ಅವರು ಪಡೆದುಕೊಂಡಿರುವ ರಕ್ಷಣೆಯು ತಾತ್ಕಾಲಿಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.

"ಯಾವುದೇ ಸಮಯದಲ್ಲಿ ಆಕೆಯನ್ನು ಬಂಧಿಸಲಾಗುವುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಬೇರೆ ರಾಜ್ಯದ ನ್ಯಾಯಾಲಯದಿಂದ ಪರಿಹಾರ ಪಡೆಯಲು ಅವರು ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಆದ್ದರಿಂದ, ಅರ್ಜಿದಾರರು ಕೋರಿದಂತೆ ತಾತ್ಕಾಲಿಕ ರಕ್ಷಣೆ ನೀಡಬಹುದು ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. " ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ದಿಶಾ ರವಿ ಅವರೊಂದಿಗೆ "ಟೂಲ್-ಕಿಟ್" ತಯಾರಿಕೆಯಲ್ಲಿ ನಿಕಿತಾ ಭಾಗಿಯಾಗಿದ್ದು, ಕಳೆದ ತಿಂಗಳು ದೆಹಲಿಯಲ್ಲಿ ರೈತರು ನಡೆಸಿದ ಸಾಮೂಹಿಕ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಅದೇ ಟೂಲ್ ಕಿಟ್ ಬಳಸಲಾಗಿದೆ ಎಂದು ಆರೋಪಿಸಿದ್ದ ಪೊಲೀಸರು ವಾರೆಂಟ್ ಪಡೆದು ಬಂಧನಕ್ಕೆ ಮುಂದಾಗಿದ್ದರು.

ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಕಾರ್ಯಕರ್ತೆ ದಿಶಾ ರವಿ ಅವರನ್ನು ದೇಶದ್ರೋಹದ ಆರೋಪದ ಮೇಲೆ ಕಳೆದ ವಾರಾಂತ್ಯದಲ್ಲಿ ಬಂಧಿಸಲಾಗಿದ್ದು, ಸದ್ಯ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಆದರೆ, ಪೊಲೀಸರು ತಮ್ಮನ್ನು ಬಂಧಿಸದಂತೆ ಕೋರಿ ಮಿಕಿತಾ ಜೇಕಬ್ ಮುಂಬೈನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

"ನ್ಯಾಯಾಲಯವು ಅವರಿಗೆ ಮೂರು ವಾರಗಳ ತಾತ್ಕಾಲಿಕ ರಕ್ಷಣೆಯನ್ನು ನೀಡಿದೆ" ಎಂದು ಜೇಕಬ್ ಪರ ವಕೀಲ ಸಂಜುಕ್ತ ಡೇ ನ್ಯಾಯಾಲಯದ ಬಳಿ ಸುದ್ದಿಗಾರರಿಗೆ ತಿಳಿಸಿದರು.

"ಹಿಂಸಾಚಾರದ ಬಗ್ಗೆ ಟೂಲ್ ಕಿಟ್‌ನಲ್ಲಿ ಏನೂ ಇಲ್ಲ, ಇದು ಕೃಷಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮಾತ್ರ ರಚಿಸಲಾಗಿದೆ, ಹಿಂಸಾಚಾರವನ್ನು ಸೃಷ್ಟಿಸುವುದಕ್ಕಾಗಿ ಅಲ್ಲ" ಎಂದು ಡೇ ಹೇಳಿದ್ದಾರೆ.

ಈ ದಾಖಲೆ ಕುರಿತಂತೆ ನಿಕಿತಾ ಅವರನ್ನು ಈಗಾಗಲೇ ಪೊಲೀಸರು ಪ್ರಶ್ನಿಸಿದ್ದಾರೆ. ಜನವರಿ 26 ರಂದು ನಡೆದ ಘಟನೆಗಳ ಕುರಿತಾದ ತನಿಖೆಯಲ್ಲಿ ಅವರೊಂದಿಗೆ ಸಹಕರಿಸಲು ಅವರು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಹೇಗೆ ನಡೆಸಬೇಕೆಂಬ ಮಾಹಿತಿ ಇದ್ದ ಟೂಲ್ ಕಿಟ್ ಅನ್ನು ಫೆಬ್ರವರಿ ಆರಂಭದಲ್ಲಿ ಸ್ವೀಡನ್ ಪರಿಸರ ಕಾರ್ಯಕರ್ತೆ ಥನ್ ಬರ್ಗ್ ಟ್ವೀಟ್ ಮಾಡಿದ್ದರು. ಬಳಿಕ ಅದನ್ನು ಡಿಲೀಟ್ ಮಾಡಿದ್ದರು. ಗ್ರೇಟಾ ಶೇರ್ ಮಾಡಿದ್ದ ಟೂಲ್ ಕಿಟ್‌ನಲ್ಲಿ ಖಲಿಸ್ತಾನಿ ಪರವಾದ ಅಂಶಗಳಿದ್ದು, ಇದು ದೇಶದ್ರೋಹದ ಕೃತ್ಯ ಎಂದು ಪೊಲೀಸರು ಹೇಳಿದ್ದರು. ಟೂಲ್ ಕಿಟ್ ಮೂಲವನ್ನು ಜಾಲಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.