ಮುಂಬೈ: ಇನ್ಫೊಸಿಸ್ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರು ಬಾಂಬೆ ಐಐಟಿಗೆ ₹ 315 ಕೋಟಿ ದೇಣಿಗೆ ನೀಡಿದ್ದಾರೆ.
ನಂದನ್ ಅವರು ಯುಐಡಿಎಐನ ಸ್ಥಾಪಕ ಅಧ್ಯಕ್ಷರೂ ಹೌದು. ಈ ಹಿಂದೆ ನಿಲೇಕಣಿ ಅವರು ₹ 85 ಕೋಟಿ ದೇಣಿಗೆ ನೀಡಿದ್ದರು. ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿನ ಸಂಶೋಧನೆಯನ್ನು ಉತ್ತೇಜಿಸಲು ಬಳಸಲಾಗಿತ್ತು. ಅಲ್ಲದೆ, ಸ್ಟಾರ್ಟ್‌ಅಪ್ ಪರಿಸರವನ್ನೂ ನಿರ್ಮಾಣ ಮಾಡುತ್ತದೆ.
‘ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಸಂಸ್ಥೆಗಳ ಜಾಗತಿಕ ನಾಯಕನಾಗುವ ದೃಷ್ಟಿಯನ್ನಿಟ್ಟುಕೊಂಡಿರುವ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಬಾಂಬೆ ಐಐಟಿಗೆ ಈ ದೇಣಿಗೆ ಆಧಾರವಾಗಿದೆ’ ಎಂದು ಬಾಂಬೆ ಐಐಟಿ ಹಾಗೂ ನಂದನ್ ನಿಲೇಕಣಿ ಅವರಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಯಿತು.
‘ಬಾಂಬೆ ಐಐಟಿ ನನ್ನ ಜೀವನ ರೂಪಿಸಿದ ಮೈಲಿಗಲ್ಲು. ಈ ಸಂಸ್ಥೆಯೇ ನನ್ನ ಪ್ರಯಾಣಕ್ಕೆ ಬುನಾದಿ ಹಾಕಿದ್ದು. ಈ ಗೌರವಾನ್ವಿತ ಸಂಸ್ಥೆಯು 50 ವರ್ಷದಿಂದ ನನ್ನ ಜೊತೆಗಿದೆ. ಅದಕ್ಕಾಗಿ ಈ ಸಂಸ್ಥೆಗೆ ನಾನು ಋಣಿಯಾಗಿದ್ದೇನೆ ಮತ್ತು ಇದರ ಭವಿಷ್ಯಕ್ಕಾಗಿ ದೇಣಿಗೆ ನೀಡಲು ಸಿದ್ಧನಾಗಿದ್ದೇನೆ. ಈ ದೇಣಿಗೆ ಹಣಕಾಸು ಸಹಾಯಕ್ಕಿಂತ ದೊಡ್ಡದು. ನನಗೆ ಉತ್ತಮ ಜೀವನ ಕೊಟ್ಟ ಸ್ಥಳಕ್ಕೆ ಸಮರ್ಪಿಸುತ್ತಿರುವ ಕೊಡುಗೆ ಹಾಗೂ ನಾಳಿನ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಬದ್ಧತೆ ಇದಾಗಿದೆ’ ಎಂದು ನಿಲೇಕಣಿ ಅವರು ಹೇಳಿದರು.
'ಸಂಸ್ಥೆಯನ್ನು ಗಮನಾರ್ಹವಾಗಿ ಅಭಿವೃದ್ಧಿಪಡಿಸಲು ಹಾಗೂ ಜಾಗತಿಕ ನಾಯಕತ್ವದತ್ತ ದೃಢವಾಗಿ ಮುನ್ನಡೆಸಲು ದೇಣಿಗೆ ಸಹಾಯಕಾರಿ’ ಎಂದು ಐಐಟಿ ಬಾಂಬೆಯ ನಿರ್ದೇಶಕ ಪ್ರೊ. ಸುಭಾಸಿಸ್ ಚೌಧುರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.