ADVERTISEMENT

ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ನಿಮ್ಹಾನ್ಸ್‌ಗೆ ಮಂಡೇಲಾ ಪ್ರಶಸ್ತಿ

ಪಿಟಿಐ
Published 31 ಮೇ 2024, 15:29 IST
Last Updated 31 ಮೇ 2024, 15:29 IST
<div class="paragraphs"><p>ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಒಂದು ನೋಟ</p></div>

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಒಂದು ನೋಟ

   

-ಪ್ರಜಾವಾಣಿ ಚಿತ್ರ

ನವದೆಹಲಿ: ಆರೋಗ್ಯ ಜಾಗೃತಿ ಮೂಡಿಸುವ ವಿಷಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಾರಣಕ್ಕೆ ಬೆಂಗಳೂರಿನ ನಿಮ್ಹಾನ್ಸ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) 2024ನೇ ಸಾಲಿನ ನೆಲ್ಸನ್‌ ಮಂಡೇಲಾ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ADVERTISEMENT

ಡಬ್ಲ್ಯುಎಚ್‌ಒ 2019ರಿಂದ ನೆಲ್ಸನ್‌ ಮಂಡೇಲಾ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ಆರೋಗ್ಯ ಜಾಗೃತಿ ಮೂಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ವ್ಯಕ್ತಿಗಳು, ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಈ ಪ್ರಶಸ್ತಿಯ ಮೂಲಕ ಗೌರವಿಸುತ್ತದೆ. 

ಕೇಂದ್ರ ಸಚಿವ ಮನ್‌ಸುಖ್‌ ಮಂಡಾವಿಯಾ ಪ್ರಶಸ್ತಿಗೆ ಪಾತ್ರವಾಗಿರುವ ನಿಮ್ಹಾನ್ಸ್‌ಗೆ ಅಭಿನಂದನೆ ಸಲ್ಲಿಸಿದ್ದು, ‘ಎಲ್ಲರ ಆರೋಗ್ಯದ ಕಾಳಜಿ ವಹಿಸುವ ಭಾರತದ ಪ್ರಯತ್ನಗಳನ್ನು ಈ ಪ್ರಶಸ್ತಿ ಗುರುತಿಸಿದಂತಾಗಿದೆ’ ಎಂದಿದ್ದಾರೆ. 

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಬಹಳ ಮುಖ್ಯವಾದ ಕೆಲಸಗಳನ್ನು ಮಾಡುತ್ತಿರುವ ನಿಮ್ಹಾನ್ಸ್‌ಗೆ ಪ್ರಶಸ್ತಿ ಸಂದಿರುವುದಕ್ಕೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರೂ ಹರ್ಷ ವ್ಯಕ್ತಪಡಿಸಿದ್ದಾರೆ. 

‘ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ. ಇದು ನಿಮ್ಹಾನ್ಸ್‌ನ ಈಚಿನ ಹಾಗೂ ಹಿಂದಿನ ಕೆಲಸಗಳಿಗೆ ಸಂದಿರುವ ಮನ್ನಣೆಯಷ್ಟೇ ಅಲ್ಲ, ಅದು ಪ್ರಾರಂಭವಾದಾಗಿನಿಂದಲೂ ಇರುವ ದೂರದೃಷ್ಟಿಗೆ ದೊರೆತಿರುವ ಗೌರವದ ಮುದ್ರೆ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡಲು ಇದು ಪ್ರೇರಣೆ’ ಎಂದು ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.