ತಿರುವನಂತಪುರಂ: ಎರಡು ಅಸಹಜ ಸಾವು ಪ್ರಕರಣ ದಾಖಲಾದ ಬೆನ್ನಲ್ಲೇ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಇದರ ಬೆನ್ನಲ್ಲೇ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜ್ವರದ ಹಿನ್ನಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವ್ಯಕ್ತಿಗಳು ಅಸಹಜವಾಗಿ ಸಾವಿಗೀಡಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮೃತರಲ್ಲಿ ಒಬ್ಬರ ಸಂಬಂಧಿಕನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ಸೋಂಕಿತ ಪ್ರಕರಣ ಮೇ 19, 2018 ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿತ್ತು. 2018ರ ಜೂನ್ 1 ರವರೆಗೆ ರಾಜ್ಯದಲ್ಲಿ 17 ಸಾವುಗಳು ಮತ್ತು 18 ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದವು. 2021ರಲ್ಲಿ 12 ವರ್ಷದ ಬಾಲಕನೊಬ್ಬ ವೈರಸ್‌ಗೆ ಬಲಿಯಾಗಿದ್ದನು.
ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಹಾಗೂ ನೇರ ಸಂಪರ್ಕದಿಂದ ನಿಫಾ ವೈರಸ್ ಹರಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.