ನವದೆಹಲಿ: ಕೋವಿಡ್–19ಗೆ ಹೋಲಿಸಿದರೆ ನಿಪಾ ಮರಣ ಪ್ರಮಾಣ ಶೇ 40–70ರಷ್ಟು ಹೆಚ್ಚಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕ ರಾಜೀವ್ ಬಾಹಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಈ ಮಾಹಿತಿ ನೀಡಿದ ಅವರು, ಕೊರೊನಾ ಮರಣ ಪ್ರಮಾಣ ಶೇ 2 ರಿಂದ 3ರಷ್ಟು ಮಾತ್ರ ಇತ್ತು, ಆದರೆ ನಿಪಾ ಮರಣ ಪ್ರಮಾಣ 40 ರಿಂದ70 ಪ್ರತಿಶತದಷ್ಟಿದೆ ಎಂದರು.
ಇದನ್ನೂ ಓದಿ: ಕೇರಳ: ನಿಪಾ ಸೋಂಕಿತರ ಚಿಕಿತ್ಸೆಗೆ ಮೊನೊಕ್ಲೋನಲ್ ಪ್ರತಿಕಾಯ ತಲುಪಿಸಿದ ಐಸಿಎಂಆರ್
‘ಸೋಂಕು ಹರಡುವಿಕೆ ಮತ್ತೆ ಏರಿಕೆಯಾಗುತ್ತಿರುವುದೇಕೆ ಎನ್ನುವುದು ತಿಳಿಯುತ್ತಿಲ್ಲ, ಕೇರಳದಲ್ಲಿ ಕಂಡುಬಂದ ವೈರಸ್ ಬಾವಲಿಗಳಿಂದ ಹರಡುತ್ತಿದೆ ಎನ್ನುವುದನ್ನು ಪತ್ತೆ ಮಾಡಿದ್ದೇವೆ. ಆದರೆ ಬಾವಲಿಗಳಿಂದ ಮನುಷ್ಯರಿಗೆ ಯಾವ ರೀತಿ ಸೋಂಕು ಹರಡುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅದನ್ನು ಪತ್ತೆಮಾಡಲು ಈ ಬಾರಿ ಮತ್ತೆ ಪ್ರಯತ್ನಿಸುತ್ತಿದ್ದೇವೆ. ಮಳೆಗಾಲದ ಸಮಯದಲ್ಲೇ ಇದು ಹೆಚ್ಚಾಗಿ ಹರಡುತ್ತದೆ’ ಎಂದು ಅವರು ಹೇಳಿದರು.
ನಿಪಾ ವೈರಸ್‌ಗೆ ಚಿಕಿತ್ಸೆ ನೀಡಲು ಭಾರತವು ಆಸ್ಟ್ರೇಲಿಯಾದಿಂದ 20ಕ್ಕೂ ಹೆಚ್ಚು ಡೋಸ್ ಮೊನೊಕ್ಲೋನಲ್ ಪ್ರತಿಕಾಯವನ್ನು ಆಮದು ಮಾಡಿಕೊಳ್ಳುತ್ತಿದೆ. 2018ರಲ್ಲಿ ಕೆಲವು ಡೋಸ್‌ಗಳಷ್ಟೇ ಸಿಕ್ಕಿತ್ತು. ಪ್ರಸ್ತುತ 10 ರೋಗಿಗಳಿಗಾಗುವಷ್ಟು ಡೋಸ್‌ಗಳು ಮಾತ್ರ ಇವೆ. ಔಷಧವನ್ನು ಸೋಂಕು ಪತ್ತೆಯಾದ ಆರಂಭದಲ್ಲಿಯೇ ತೆಗೆದುಕೊಳ್ಳಬೇಕು ಎಂದು ರಾಜೀವ್ ಬಾಹಲ್ ತಿಳಿಸಿದರು.
ಮೊನೊಕ್ಲೋನಲ್ ಪರಿಣಾಮಕಾರಿತ್ವದ ಪ್ರಯೋಗಗಳನ್ನು ಇನ್ನೂ ಮಾಡಲಾಗಿಲ್ಲ. ಇದನ್ನು ಆರಂಭಿಕ ಬಳಕೆಯ ಔಷಧವಾಗಿ ಮಾತ್ರ ಬಳಸಬಹುದು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.