ADVERTISEMENT

ನೀರವ್ ಮೋದಿ ಕೊಟ್ಟ ನಕಲಿ ವಜ್ರ ಉಂಗುರದಿಂದ ಮುರಿದು ಬಿದ್ದ ನಿಶ್ಚಿತಾರ್ಥ

ಪಿಎನ್‌ಬಿ ಹಗರಣ ಆರೋಪಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 8:35 IST
Last Updated 10 ಅಕ್ಟೋಬರ್ 2018, 8:35 IST
   

ನವದೆಹಲಿ: ಪಿಎನ್‌ಬಿ (ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌) ಹಗರಣ ಆರೋಪಿ ನೀರವ್ ಮೋದಿ ನಕಲಿ ವಜ್ರದ ಉಂಗುರ ಮಾರಾಟ ಮಾಡಿದ್ದರಿಂದ ಕೆನಡಾ ಯುವಕನ ನಿಶ್ಚಿತಾರ್ಥ ಮುರಿದು ಬಿದ್ದಿದೆ.

ಕೆನಡಾದ ಪೌಲ್ ಅಲ್ಫೋನ್ಸೋ ನೀರವ್ ಮೋದಿಯ ಮೋಸದ ಬಲೆಗೆ ಬಿದ್ದ ಯುವಕ. ಈತ ಪಾವತಿ ನಿರ್ವಹಣಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ.

ಭಾರತದಲ್ಲಿ ನೀರವ್ ಮೋದಿ ಪಿಎನ್‌ಬಿ ಹಗರರಣದಲ್ಲಿ ಸಿಲುಕಿರುವ ಬಗ್ಗೆ ಅಲ್ಫೋನ್ಸಾ ಅವರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ 200,000 ಡಾಲರ್ಮೌಲ್ಯದ ಎರಡು ವಜ್ರದ ಉಂಗುರಗಳನ್ನು ತಮ್ಮ ಪ್ರೇಯಸಿಗಾಗಿ ಹಾಂಗ್‌ಕಾಂಗ್‌ನಲ್ಲಿ ಕೊಂಡುಕೊಂಡಿದ್ದರು. ಆದರೆ ಉಂಗುರಗಳು ನಕಲಿ ಎಂದು ತಿಳಿದ ಕಾರಣ ನಿಶ್ಚಿತಾರ್ಥ ನಿಂತುಹೋಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ವರದಿ ಮಾಡಿದೆ.

ಘಟನೆ ವಿವರ:
ಅಲ್ಫೋನ್ಸೋ ಅವರು ನೀರವ್‌ ಮೋದಿ ಅವರನ್ನು 2012ರಲ್ಲಿ ಲಾಸ್ ಏಂಜಲ್ಸ್‌ನಲ್ಲಿರುವ ದ ಬೆವೇರ್ಲಿ ಹಿಲ್ಸ್ ಹೋಟಲ್‌ನಲ್ಲಿ ಭೇಟಿಯಾಗಿದ್ದರು. ಮಲೀಬುನಲ್ಲಿ ಪುನಃ ಭೇಟಿಯಾದರು. ನಂತರ ಎರಡು ವರ್ಷ ಭೇಟಿ ಮಾಡಿರಲಿಲ್ಲ. ಆದರೆ ಅಷ್ಟರಲ್ಲಿ ಭಾರತದಲ್ಲಿ ನೀರವ್ ಮೋದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯದ ಅಲ್ಫೋನ್ಸೋ ತಮ್ಮ ಭಾವಿ ಪತ್ನಿಗಾಗಿ ಏಪ್ರಿಲ್‌ನಲ್ಲಿ 100,000 ಡಾಲರ್ ಮೌಲ್ಯದ ಉಂಗುರ ನೀಡುವಂತೆ ಬೇಡಿಕೆ ಇಟ್ಟರು. ಆದರೆ ನಿಮಗೆ ಉತ್ತಮವಾದದ್ದು 1,20,000 ಡಾಲರ್ ಮೌಲ್ಯದಲ್ಲಿ ದೊರೆಯುತ್ತದೆ ಎಂದು ಹೇಳಿದ ನೀರವ್ ಮಾತಿಗೆ ಅಲ್ಫೋನ್ಸೋ ಸಮ್ಮತಿ ಸೂಚಿಸಿದ್ದರು.

ಈ ಉಂಗುರವನ್ನು ಇಷ್ಟಪಟ್ಟ ಅಲ್ಫೋನ್ಸೋ ಭಾವಿ ಪತ್ನಿ ಮತ್ತೊಂದು ಉಂಗುರ ಕೇಳಿದಾಗ 80,000 ಡಾಲರ್ ಮೌಲ್ಯದ ಉಂಗುರ ಮಾಡಿಕೊಡಲು ನೀರವ್ ಮೋದಿಗೆ ಹೇಳಿದರು. ಈ ಎರಡು ಉಂಗುರದ ಹಣವನ್ನು ತಮ್ಮ ಹಾಂಗ್‌ಕಾಂಗ್ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿದರು. ನೀರವ್ ಮೋದಿ ಸಹಾಯಕ ಅರಿ ಎಂಬುವರಿಂದ ಜೂನ್‌ನಲ್ಲಿ ಉಂಗುರಗಳನ್ನು ಪಡೆದರು. ಈ ಸಂಬಂಧ ದೃಢೀಕರಣ ಪತ್ರ ಬಾರದೆ ಇದ್ದಾಗ ಇಬ್ಬರು ಆತಂಕಕ್ಕೊಳಗಾದರು. ಅಲ್ಫೋನ್ಸೋ ಹಲವು ಬಾರಿ ಮೇಲ್ ಮಾಡಿದಾಗಲೂ ನೀರವ್ ಮೋದಿ ಕಡೆಯಿಂದ ಉತ್ತರ ಬರಲಿಲ್ಲ.

ಬಳಿಕ ಅಲ್ಫೋನ್ಸೋ ಅವರ ಭಾವಿ ಪತ್ನಿ ಉಂಗುರಗಳನ್ನು ಪರೀಕ್ಷಿಸಿದಾಗ ನಕಲಿ ಎಂದು ಗೊತ್ತಾಗಿದೆ. ಇದಾದ ಎರಡು ದಿನಗಳ ಬಳಿಕ ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿದೆ.

ಆಗಸ್ಟ್ ತಿಂಗಳಲ್ಲಿ ನೀರವ್ ಮೋದಿಗೆ ಮೇಲ್ ಮಾಡಿದ ಅಲ್ಫೋನ್ಸೋ, ನಿಮ್ಮ ಈ ಮೋಸದಿಂದ ನನಗಾದ ನೋವಿನ ತೀವ್ರತೆಯ ಬೆಲೆ ತಿಳಿದಿದೆಯಾ? ನೀವು ನನ್ನ ಮತ್ತು ಆಕೆಯ ನಡುವಿನ ಉತ್ತಮ ಬಾಂದವ್ಯವನ್ನು ನಾಶ ಮಾಡಿದ್ದೀರಿ. ನೀವು ನನ್ನ ಬದುಕಿನ ದಿವಾಳಿಕೋರ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT