ದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ (31) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬಡೆ ಅವರು ಹಿಂದೆ ಸರಿದಿದ್ದಾರೆ.
ಈ ಅರ್ಜಿಯ ವಿಚಾರಣೆಗೆ ಬುಧವಾರ ಹೊಸ ಪೀಠ ರಚನೆ ಮಾಡುವುದಾಗಿ ಸಿಜೆಐ ತಿಳಿಸಿದ್ದಾರೆ. ಆದರೆ, ತೀರ್ಪು ಮರುಪರೀಶಿಲನೆ ಕೋರಿ ಅಕ್ಷಯ್ ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿರುವ ಅಂಶಗಳು ಮಾತ್ರ ಕುತೂಹಲ ಮೂಡಿಸಿವೆ.
ಮರು ಪರಿಶೀಲನಾ ಅರ್ಜಿಯಲ್ಲಿ ಏನಿದೆ?
‘ಗಲ್ಲು ಶಿಕ್ಷೆಯಿಂದ ಅಪರಾಧಿಯನ್ನು ಕೊನೆಗೊಳಿಸಬಹುದೇ ವಿನಾ ಅಪರಾಧವನ್ನಲ್ಲ. ಆದ್ದರಿಂದ ನಮಗೆ ಮರಣದಂಡನೆ ವಿಧಿಸಿ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಅಕ್ಷಯ್ ಕುಮಾರ್ ಹೇಳಿದ್ದಾನೆ.
ಆತ ಹೇಳಿದ್ದು...
* ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಬಾರದು. ಬದಲಿಗೆ ಅವರಲ್ಲಿ ಬದಲಾವಣೆ ತರಲು ಕ್ರಮಬದ್ಧವಾದ ಯೋಜನೆ ರೂಪಿಸಬೇಕು
* ಗಲ್ಲು ಶಿಕ್ಷೆ ನೀಡುವುದರಿಂದ ಇಂಥ ಅಪರಾಧಗಳನ್ನು ತಡೆಯಲು ಸಾಧ್ಯ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ
* ಮರಣ ದಂಡನೆ ನೀಡಿದರೆ ಅಪರಾಧಿಗೆ ಸುಧಾರಣೆಯ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ
* ‘ಬಡತನದ ಹಿನ್ನೆಲೆಯಿಂದ ಬಂದ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವ ಅಪಾಯ ಹೆಚ್ಚು ಇದೆ’ ಎಂಬ ನ್ಯಾಯಮೂರ್ತಿ ಪಿ.ಎನ್. ಭಗವತಿ ಅವರ ವಾದವನ್ನು ಉಲ್ಲೇಖಿಸಿ, ‘ನ್ಯಾಯ ವ್ಯವಸ್ಥೆಯು ಸ್ಥಿರ ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ ಎಂದಾದರೆ ಯಾರು ಬದುಕಬೇಕು, ಯಾರು ಸಾಯಬೇಕು ಎಂದು ನಿರ್ಧರಿಸುವ ಅಧಿಕಾರ ನ್ಯಾಯಾಂಗಕ್ಕೆ ಎಲ್ಲಿದೆ?
* ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿ ಜೀವಿತಾವಧಿ ಕಡಿಮೆಯಾಗುತ್ತಲೇ ಇದೆ. ಹೀಗಿರುವಾರ ಮರಣದಂಡನೆ ನೀಡುವ ಅಗತ್ಯವೇನು?
* ಮನುಷ್ಯರು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದು ವೇದ–ಪುರಾಣಗಳು ಉಲ್ಲೇಖಿಸುತ್ತವೆ. ಕಲಿಯುಗದಲ್ಲಿ ಜೀವಿತಾವಧಿ 50–60 ವರ್ಷಗಳಿಗೆ ಇಳಿದಿದೆ. ಈಗಲೂ ಮರಣದಂಡನೆ ಬೇಕೇ?
ಅಕ್ಷಯ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಖ್ಯನ್ಯಾಯಮೂರ್ತಿ ಎಸ್.ಎ ಬೋಬಡೆ, ಅಶೋಕ್ ಭೂಷಣ್ ಮತ್ತು ಆರ್ ಭಾನುಮತಿ ಅವರಿದ್ದ ಪೀಠ ಆರಂಭಿಸಿತು. ವಿಚಾರಣೆ ಶುರುವಿನಲ್ಲೇ ಮುಖ್ಯನ್ಯಾಯಮೂರ್ತಿ ಬೋಬಡೆ ಅವರು ವೈಯಕ್ತಿಕ ಕಾರಣಗಳಿಂದ ತಾವು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು.
ಈ ಅರ್ಜಿಯ ವಿಚಾರಣೆಗೆ ಬುಧವಾರ (ಡಿ.18) ಬೆಳಗ್ಗೆ 10.30ಕ್ಕೆ ಹೊಸ ಪೀಠ ರಚನೆ ಮಾಡುವುದಾಗಿ ಮುಖ್ಯನ್ಯಾಯಮೂರ್ತಿಗಳು ಹೇಳಿದ್ದಾರೆ.
2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಘಟನೆಗೆ ಸಂಬಂಧಿಸಿ ಅಕ್ಷಯ್ ಹಾಗೂ ಇತರ ಮೂವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಇತರ ಮೂವರು ಅಪರಾಧಿಗಳು ಈ ಹಿಂದೆಯೇ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು 2018ರ ಜುಲೈ 19ರಂದು ಕೋರ್ಟ್ ತಳ್ಳಿಹಾಕಿತ್ತು. ಆ ಮೂವರ ಜತೆಗೆ ಅಕ್ಷಯ್ ಕುಮಾರ್ ಅರ್ಜಿ ಸಲ್ಲಿಸಿರಲಿಲ್ಲ. ಈಗ ತನ್ನ ವಕೀಲ ಎ.ಪಿ. ಸಿಂಗ್ ಮೂಲಕ ಆತ ತೀರ್ಪಿನ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ. ರಾಮ್ ಸಿಂಗ್ ಎಂಬ ಇನ್ನೊಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.