ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಗೆ ಕನ್ನಡಿಗ ನ್ಯಾಯಮೂರ್ತಿ ಎಸ್.ಎ.ಬೋಪಣ್ಣ ಒಳಗೊಂಡ ಹೊಸ ನ್ಯಾಯಪೀಠ ನೇಮಕ ಮಾಡಲಾಗಿದೆ. ಇದರಲ್ಲಿ ನ್ಯಾಯಮೂರ್ತಿ ಆರ್.ಭಾನುಮತಿ ಮತ್ತು ಅಶೋಕ್ ಭೂಷಣ್ ಇದ್ದಾರೆ.
ಮರುಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮಂಗಳವಾರ ಹಿಂದೆ ಸರಿದಿದ್ದರು.ಈ ಪ್ರಕರಣದಲ್ಲಿ ಸಂತ್ರಸ್ತೆ ತಾಯಿಯ ಪರವಾಗಿ ತಮ್ಮ ಸಂಬಂಧಿಯೊಬ್ಬರು ಹಾಜರಾಗಿದ್ದರು. ಬಹುಶಃ ಈ ಅರ್ಜಿಯ ವಿಚಾರಣೆಯನ್ನು ಇನ್ನೊಂದು ಪೀಠ ನಡೆಸುವುದೇ ಸೂಕ್ತ ಎಂದು ಬೊಬಡೆ ಅಭಿಪ್ರಾಯಪಟ್ಟಿದ್ದರು.
ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಅಪರಾಧಿಗಳನ್ನಾಗಿ ತೀರ್ಮಾನಿಸಲಾಗಿತ್ತು. ಇವರಲ್ಲೊಬ್ಬ ಅಪ್ರಾಪ್ತ ಜೈಲು ಶಿಕ್ಷೆಯನ್ನು ಅನುಭವಿಸಿ ನಂತರ ಬಿಡುಗಡೆಯಾಗಿದ್ದರೆ, ಮತ್ತೊಬ್ಬ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದನು. ಉಳಿದ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಈ ಪೈಕಿ ಒಬ್ಬ ಅಪರಾಧಿ ಅಕ್ಷಯ್ ಸಿಂಗ್ ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಇತರ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಿರಸ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.