ADVERTISEMENT

'ನಿರ್ಭಯಾ' ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಜಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2020, 6:17 IST
Last Updated 20 ಮಾರ್ಚ್ 2020, 6:17 IST
ನೇಣಿಗೇರಿದ ನಿರ್ಭಯಾ ಅಪರಾಧಿಗಳು
ನೇಣಿಗೇರಿದ ನಿರ್ಭಯಾ ಅಪರಾಧಿಗಳು   

ನವದೆಹಲಿ: ನಿರ್ಭಯಾ ಹಂತಕರಿಗೆ ಶುಕ್ರವಾರ (ಮಾರ್ಚ್ 20) ಮುಂಜಾನೆ 5.30ಕ್ಕೆ ಮರಣದಂಡನೆ ಜಾರಿ ಮಾಡಲಾಯಿತು.ಕಪ್ಪುಬಟ್ಟೆ ಧರಿಸಿದ್ದ ಕೈದಿಗಳನ್ನು ವಾರ್ಡನ್ ಮತ್ತು ಹೆಡ್‌ವಾರ್ಡನ್ ಗಲ್ಲು ಕೋಣೆಗೆ ಕರೆತಂದಿದ್ದರು. ಮ್ಯಾಜಿಸ್ಟ್ರೇಟ್ ಸಹಿ ಹಾಕಿದ್ದಡೆತ್ ವಾರಂಟ್‌ ಓದಿದ ನಂತರ ನೇಣುಗಂಬಕ್ಕೆ ಏರಿಸಲಾಯಿತು.

ಗಲ್ಲು ಶಿಕ್ಷೆ ಜಾರಿಗೆ ಕೆಲವೇ ಗಂಟೆಗಳು ಬಾಕಿಯಿರುವಂತೆ ನಿರ್ಭಯಾ ಪ್ರಕರಣದ ಅಪರಾಧಿಗಳು ದೆಹಲಿ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಅರ್ಜಿ ಹೈಕೋರ್ಟ್‌ನಲ್ಲಿ ವಜಾ ಆದ ನಂತರಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಮಧ್ಯರಾತ್ರಿನ್ಯಾಯಮೂರ್ತಿ ಭಾನುಮತಿ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ, ಅಪರಾಧಿಗಳ ಅರ್ಜಿ ತಳ್ಳಿ ಹಾಕಿ, ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು.

6.14:ನಿರ್ಭಯಾ ತಾಯಿ ಆಶಾದೇವಿ ಪ್ರತಿಕ್ರಿಯೆ-ಸುಪ್ರಿಂಕೋರ್ಟ್‌ನಿಂದ ಹಿಂದಿರುಗಿದ ತಕ್ಷಣ ಮಗಳ ಚಿತ್ರಪಟ ತಬ್ಬಿಕೊಂಡು ಕಣ್ಣೀರಿಟ್ಟೆ.

ADVERTISEMENT

6.09: ಮರಣೋತ್ತರ ಪರೀಕ್ಷೆ ಮುಕ್ತಾಯ. ಸಾವು ಖಚಿತಪಡಿಸಿದ ವೈದ್ಯರು

6.01:ಮರಣೋತ್ತರ ಪರೀಕ್ಷೆ- ನೇಣುಗಂಬದಲ್ಲಿ ಜೀವಬಿಟ್ಟ ಅಪರಾಧಿಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣದಂಡನೆ ಜಾರಿಯಾದ ಅರ್ಧಗಂಟೆಯವರೆಗೆ ದೇಹಗಳು ನೇಣುಗಂಬದಲ್ಲಿಯೇ ಇರಬೇಕು ಎನ್ನುವ ನಿಯಮವಿದೆ.

5.59:ನಿರ್ಭಯಾ ತಂದೆ ಬದ್ರಿನಾಥ್ಪ್ರತಿಕ್ರಿಯೆ-ಹೆಣ್ಣುಮಕ್ಕಳ ತಂದೆಯಂದಿರು ಒಂದು ಮಾತು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಮೌನವಾಗಿ ಸಹಿಸಿಕೊಳ್ಳಬೇಡಿ. ಮಗಳ ಪರವಾಗಿ ಗಟ್ಟಿಯಾಗಿ ನಿಂತು ಹೋರಾಡಿ. ಅವಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಡಿ. ಅವಳಿಗೇನು ಬೇಕೋ ಅರ್ಥ ಮಾಡಿಕೊಳ್ಳಿ.

5.57:ನಿರ್ಭಯಾ ತಂದೆ ಬದ್ರಿನಾಥ್ಪ್ರತಿಕ್ರಿಯೆ-ಇದು ಕೇವಲ ನಿರ್ಭಯಾ ಒಬ್ಬಳ ಗೆಲುವಲ್ಲ. ದೇಶದಲ್ಲಿ ಮಹಿಳೆಯರನ್ನು ಹಿಂಸಿಸುವವರಿಗೆ ಎಚ್ಚರಿಕೆ ನೀಡುವ ದಿನ. ಒಬ್ಬ ತಂದೆಯಾಗಿ ಯೋಚಿಸಿದಾಗ ಗಲ್ಲಿಗೇರಿದವರ ಬಗ್ಗೆಯೂ ನನ್ನಲ್ಲಿ ಮರುಕ ಉಂಟಾಗುತ್ತದೆ. ಆದರೆ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ. ಅಪರಾಧಿಗಳ ಪರ ವಕೀಲರ ಬಗ್ಗೆ ನನಗೆ ಸಿಟ್ಟಿಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ನಮ್ಮ ವಕೀಲರು ತಮ್ಮ ಕೆಲಸ ಪರಿಣಾಮಕಾರಿಯಾಗಿ ಮಾಡಿದರು. ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಬೇಕು. ಅದಕ್ಕಾಗಿ ಒಂದು ಹೋರಾಟ ರೂಪಿಸುತ್ತೇವೆ. ಕಾನೂನು ಸಂಘರ್ಷದ ವೇಳೆ ನಮಗೆ ಕಾನೂನಿನಲ್ಲಿರುವ ಲೋಪಗಳು ಅರಿವಾದವು. ನಾನು ಅಂಥವನ್ನು ಪಟ್ಟಿ ಮಾಡಿದ್ದೇನೆ. ಕಾನೂನು ಸಚಿವರು ಸೇರಿದಂತೆ ಸಂಬಂಧಿಸಿದವರನ್ನು ಭೇಟಿಯಾಗಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶೀಘ್ರ ಶಿಕ್ಷೆಯಾಗುವ ವ್ಯವಸ್ಥೆ ರೂಪಿಸುವಂತೆ ಮಾಡಲು ಪ್ರಯತ್ನಿಸುತ್ತೇನೆ.

5.48:ವಕೀಲೆ ಸೀಮಾ ಕುಶ್ವಾಹಾ ಪ್ರತಿಕ್ರಿಯೆ-ನಿರ್ಭಯಾ ಪ್ರಕರಣ ಕೇವಲ ಅತ್ಯಾಚಾರ ಮತ್ತು ಕೊಲೆಯಲ್ಲ. ಆಕೆಯನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಲ್ಲಲಾಗಿತ್ತು. ಎಂಥ ಕಾಡುಪ್ರಾಣಿಗಳೂ ಇನ್ನೊಂದು ಜೀವಿಯ ಜೊತೆಗೆ ಹಾಗೆ ವರ್ತಿಸುವುದು ಸಾಧ್ಯವಿಲ್ಲ. ಇದು ಇಂಥ ಕ್ರೂರ ಅಪರಾಧ ಎಸಗುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿ ಇತಿಹಾಸದಲ್ಲಿ ಉಳಿದುಕೊಳ್ಳಲಿದೆ.

5.44:ನಿರ್ಭಯಾ ತಾಯಿ ಆಶಾದೇವಿ ಪ್ರತಿಕ್ರಿಯೆ-ದೇಶದ ಮಹಿಳೆಯರು, ಯುವತಿಯರು, ಬಾಲಕಿಯರಿಗೆ ನ್ಯಾಯ ಸಿಕ್ಕ -ದಿನ ಇದು. ನಿರ್ಭಯಾ ಪ್ರಕರಣದಲ್ಲಿ ನ್ಯಾಯಾಂಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು. ಅಪರಾಧಿಗಳ ಪ್ರತಿ ಮನವಿಯನ್ನೂ ವಿಚಾರಣೆ ನಡೆಸಿ, ನ್ಯಾಯ ನೀಡಿತು. ಇಂದು ಮಾರ್ಚ್ 20 ದೇಶದ ಇತಿಹಾಸದಲ್ಲಿ ಮಹತ್ವದ ದಿನ. 8 ವರ್ಷಗಳ ನಮ್ಮ ಹೋರಾಟಕ್ಕೆ ಫಲ ಸಿಕ್ಕ ದಿನ.

5.32:'2012ರ ದೆಹಲಿ ಅತ್ಯಾಚಾರ ಪ್ರಕರಣದ ಎಲ್ಲಾ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು' -ತಿಹಾರ್ ಸೆರೆಮನೆಯ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಹೇಳಿಕೆ.

5.30:ಶಿಕ್ಷೆ ಜಾರಿ- ನಾಲ್ವರು ಅಪರಾಧಿಗಳಿಗೆ ಏಕಕಾಲಕ್ಕೆ ಮರಣದಂಡನೆ ಜಾರಿ ಮಾಡಲಾಯಿತು. ನಾಲ್ಕು ಪ್ರತ್ಯೇಕ ನೇಣುಗಂಬಗಳನ್ನು ಸಿದ್ಧಪಡಿಸಲಾಗಿತ್ತು.

5.25:ಕಪ್ಪು ಬಟ್ಟೆ- ಅಪರಾಧಿಗಳನ್ನು ವಧಾ ಸ್ಥಳಕ್ಕೆ ಕರೆ ತಂದ ಮುಖಕ್ಕೆ ಕಪ್ಪುಬಟ್ಟೆ ತೊಡಿಸಲಾಯಿತು.

5.20:ಸ್ನಾನ, ಭದ್ರತೆ- ಅಪರಾಧಿಗಳನ್ನು ಎಬ್ಬಿಸಿದ ಭದ್ರತಾ ಸಿಬ್ಬಂದಿ ಸ್ನಾನ ಮಾಡಲು ಸೂಚಿಸಿದರು. ಪ್ರತಿ ಅಪರಾಧಿಯ ಜೊತೆಗೆ 6 ಮಂದಿ ಜೈಲು ಸಿಬ್ಬಂದಿಯನ್ನು ಕಾವಲಿಗಾಗಿ ನಿಯೋಜಿಸಲಾಗಿದೆ.

5.20:ಡೆತ್ ವಾರಂಟ್‌ಗೆ ಸಹಿ- ಅಪರಾಧಿಗಳಿಗೆ ನ್ಯಾಯಾಲಯ ಜಾರಿ ಮಾಡಿರುವ ಡೆತ್ ವಾರಂಟ್‌ಗೆ ಸಹಿ ಹಾಕಿದ ಮ್ಯಾಜಿಸ್ಟ್ರೇಟ್.

ನ್ಯಾಯಾಲಯ ತೀರ್ಪಿನ ನಂತರ ವಿಜಯ ಚಿಹ್ನೆ ಪ್ರದರ್ಶಿಸಿದ ನಿರ್ಭಯಾ ತಾಯಿ ಆಶಾದೇವಿ

4.00:ತೀರ್ಪಿಗೆ ಸ್ವಾಗತ-ಅತ್ಯಾಚಾರ ಎಸಗಿರುವ ಕಾಮುಕರಿಗೆ ತಕ್ಕ ಶಿಕ್ಷೆಯಾಗಿದೆ. ನಾಳೆ ಮುಂಜಾನೆ ಉದಯಿಸುವ ಸೂರ್ಯ ಹೊಸ ಭರವಸೆಗೆ ಸಾಕ್ಷಿಯಾಗುತ್ತಾನೆ. ನಮ್ಮ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ. -ನಿರ್ಭಯಾ ತಾಯಿಯ ಪ್ರತಿಕ್ರಿಯೆ.

3.51:ತೀರ್ಪಿಗೆ ಸ್ವಾಗತ- 'ಇದು ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಭರವಸೆ ತುಂಬಿದ ತೀರ್ಪು' ಎಂದ ನಿರ್ಭಯಾ ಪರ ವಕೀಲೆ ಸೀಮಾ ಕುಶ್ವಾಹ.

3.49:ತೀರ್ಪು- ಪವನ್ ಗುಪ್ತ ಸಲ್ಲಿಸಿದ್ದ 2ನೇ ಕ್ಷಮಾದಾನ ಅರ್ಜಿಯ ತಿರಸ್ಕಾರ ಮರುಪರಿಶೀಲನಾ ಮನವಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಈ ಮೂಲಕ ನಿರ್ಭಯಾ ಪ್ರಕರಣದ ಎಲ್ಲ ಆರೋಪಿಗಳಿಗೆ ಬೆಳಿಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿ ಕಾಯಂ ಆಗಿದೆ.

3.46:ತೀರ್ಪು- ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ ವಿಚಾರವನ್ನು ಮರುಪರಿಶೀಲಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಬಹಳ ಸೀಮಿತವಾದ ನ್ಯಾಯಾಂಗ ಪರಿಶೀಲನಾ ಅಧಿಕಾರವಿದೆ. ಅಪರಾಧ ನಡೆದ ಅಪರಾಧಿಯೊಬ್ಬರ ಪ್ರೌಢ ವಯಸ್ಕನಾಗಿರಲಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೇಳಿದ್ದು ಸರಿಯಿಲ್ಲ. ಸೆರೆಮನೆಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎನ್ನುವುದು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸುವುದನ್ನು ಮರುಪರಿಶೀಲಿಸುವಂತೆ ಕೋರಲು ಅಧಾರವಾಗಲಾರದು.

3.42:ನ್ಯಾಯಾಲಯದ ತೀರ್ಪು ಸ್ವಾಗತಿಸಿದ 'ನಿರ್ಭಯಾ'ರ ತಾಯಿ. 'ನಮಗೆ ನ್ಯಾಯ ಸಿಕ್ಕಿತು' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

3.35:ಅತ್ಯಾಚಾರಿಗಳ ಅರ್ಜಿ ವಜಾ: ಬೆಳಿಗ್ಗೆ 5.30ಕ್ಕೆ ಗಲ್ಲು ಕಾಯಂ

3.25:ವಾದ ಮಂಡನೆ ಅಂತ್ಯ: ತೀರ್ಪು ಬರೆಯುತ್ತಿರುವ ನ್ಯಾಯಮೂರ್ತಿಗಳು

3.24:'ಅಪರಾಧಿಗಳ ಪೈಕಿ ಓರ್ವ ಅಪರಾಧ ನಡೆದಾಗ ಇನ್ನೂ ಪ್ರೌಢನಾಗಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಈ ಹಿಂದೆ ವಿಚಾರಣೆಗೆ ಪರಿಗಣಿಸಿತ್ತು. ಈ ವಿಚಾರವನ್ನು ನ್ಯಾಯಾಲಯ ತಿರಸ್ಕರಿಸಿದ ನಂತರವೂ ಪ್ರಸ್ತಾಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ನ್ಯಾಯಮೂರ್ತಿ ಬಾನುಮತಿ ಹೇಳಿದರು.

ಶುಕ್ರವಾರ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಲಿರುವ ಅಪರಾಧಿಗಳು

3.23:'ಲೆಫ್ಟಿನೆಂಟ್ ಜನರಲ್ ಎದುರು ಕ್ಷಮಾದಾನ ಅರ್ಜಿ ಬಾಕಿಯಿದೆ' ಎಂದು ಎ.ಪಿ.ಸಿಂಗ್ ವಾದ ಮಂಡನೆ. 'ಈ ವಿಚಾರವನ್ನು ನೀವು ಮಧ್ಯಾಹ್ನವೇ ಹೇಳಿದ್ದಿರಿ' ಎಂದು ನ್ಯಾಯಮೂರ್ತಿ ಭೂಷಣ್.

3.22:'ದೆಹಲಿಯ ಲೆಫ್ಟಿನೆಂಟ್ ಜನರಲ್ ಮತ್ತು ಮುಖ್ಯಮಂತ್ರಿ ಎದುರು ಕ್ಷಮಾದಾನದ ಅರ್ಜಿ ಬಾಕಿಯಿದೆ. ಅವರು ಕ್ಷಮಾದಾನ ಕೊಟ್ಟರೆ ಗಲ್ಲು ಶಿಕ್ಷೆಗೆ ಯಾವುದೇ ಅರ್ಥವಿರುವುದಿಲ್ಲ' ಎಂದು ವಕೀಲ ಎ.ಪಿ.ಸಿಂಗ್ ವಾದ ಮಂಡನೆ. 'ಈ ವಿಚಾರವನ್ನು ಪರಿಗಣಿಸಲು ಆಗುವುದಿಲ್ಲ' ಎಂದು ನ್ಯಾಯಪೀಠ.

3.21:ಅಪರಾಧಿಗಳಿಗೆ ಶಿಕ್ಷೆ ವಿಧಿಸುವಾಗ, ಕ್ಷಮಾದಾನ ಅರ್ಜಿ ಪರಿಶೀಲಿಸುವಾಗ 72ನೇ ವಿಧಿಯನ್ನು ಮುಕ್ತವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಮತ್ತೋರ್ವ ವಕೀಲರಿಂದ ವಾದ ಮಂಡನೆ.

3.20:ನಾಲ್ವರು ಅಪರಾಧಿಗಳ ಪೈಕಿ ಒಬ್ಬರು ಈ ಯೋಜಿತ ಅಪರಾಧದ ಭಾಗವಾಗಿಲ್ಲದಿರಬಹುದು ಎಂದು ವಕೀಲ ಶಾಮ್ಸ್‌ ಖ್ವಾಜಾ ವಾದ ಮಂಡನೆ.

3.19:ಗುರುವಾರವಷ್ಟೇ ಸುಪ್ರೀಂ ಕೋರ್ಟ್‌ ಅಕ್ಷಯ್‌ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಯಾವುದರ ಆಧಾರದ ಮೇಲೆ ಎರಡನೇ ಕ್ಷಮಾದಾನ ಅರ್ಜಿಯ ತಿರಸ್ಕಾರದ ವಿಚಾರವನ್ನು ಪ್ರಶ್ನಿಸುತ್ತಿದ್ದೀರಿ. ಈಗಾಗಲೇ ಮಂಡಿಸಿರುವ ವಾದವನ್ನೇ ನೀವು ಮತ್ತೆ ಮಂಡಿಸುತ್ತಿದ್ದೀರಿ ಎಂದು ನ್ಯಾಯಮೂರ್ತಿ ಭೂಷಣ್ ನುಡಿದರು.

3:16:ಆತುರದ ನ್ಯಾಯತೀರ್ಮಾನವಾಗಿದೆ ಎಂದ ಸಿಂಗ್. 'ಅಕ್ಷಯ್ ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿರುವ ಮರುಪರಿಶೀಲನಾ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ ಎಂಬ ಮಾಹಿತಿ ನೀಡಿದ ನಂತರವೂವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡದೆ ಇರಲು ಹೇಗೆ ಸಾಧ್ಯ' ಎಂದು ಸಿಂಗ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು.

3:12:ಸಿಂಗ್ ವಾದಕ್ಕೆ ನ್ಯಾಯಮೂರ್ತಿ ಭೂಷಣ್ ಪ್ರತಿಕ್ರಿಯೆ. 'ನೀವು ಈ ಎಲ್ಲ ಅಂಶಗಳನ್ನು ಹಿಂದೆಯೇ ಹಲವು ಬಾರಿ ಪ್ರಸ್ತಾಪಿಸಿದ್ದೀರಿ. ಅವು ಇಂದು ಹೇಗೆ ಪ್ರಸ್ತುವಾಗಲಿವೆ?' ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಭೂಷಣ್.

3:10:ಪವನ್‌ ಗುಪ್ತಾ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಬಚ್ಚಿಡಲಾಗಿತ್ತು ಎಂದು ಎ.ಪಿ.ಸಿಂಗ್ ನ್ಯಾಯಪೀಠದ ಎದುರು ಪ್ರಸ್ತಾಪಿಸಿದರು.

3:08:ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಪ್ರತಿವಾದ.'ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವ್ಯವಸ್ಥಿತವಾಗಿ ಬಚ್ಚಿಟ್ಟಿದ್ದರು. ಅತಿ ಮುಖ್ಯ ಮಾಹಿತಿಗಳಿದ್ದ ದಾಖಲೆಗಳನ್ನೂ ಅಧಿಕಾರಿಗಳು ಕಣ್ಮರೆ ಮಾಡಿದ್ದರು' ಎಂದು ಹೇಳಿದ ಸಿಂಗ್.

3:05: ಸರ್ಕಾರದ ಪರವಾಗಿ ವಾದ ಮಂಡನೆ ಆರಂಭಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ಪ್ರಕರಣದ ಎಲ್ಲ ಪ್ರಮುಖ ಅಂಶಗಳ ಪ್ರಸ್ತಾಪ. ಈಗ ಅಪರಾಧಿಗಳ ಪರ ವಕೀಲರು ಪ್ರಸ್ತಾಪಿಸುತ್ತಿರುವ ಅಂಶಗಳು ಈ ಹಿಂದೆಯೂ ಹಲವು ಬಾರಿ, ಹಲವು ಹಂತದ ನ್ಯಾಯಾಲಯಗಳಲ್ಲಿ ಮತ್ತು ಕ್ಷಮಾದಾನ ಅರ್ಜಿಗಳಲ್ಲಿ ಪ್ರಸ್ತಾಪವಾಗಿದೆ ಎಂದು ತುಷಾರ್ ಮೆಹ್ತಾ.

3.03: ನಿಮಗೆ ಬೇಕು ಎಂದಾಗ ಪ್ರಕರಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಮರುವಿಚಾರಣೆ ನಡೆಸಲು ಆಗುವುದಿಲ್ಲ. ರಾಷ್ಟ್ರಪತಿಗಳು ಎರಡನೇ ಬಾರಿಗೆ ಕ್ಷಮಾದಾನ ಮನವಿ ತಳ್ಳಿಹಾಕಿದ್ದನ್ನು ಈ ಆಧಾರದಲ್ಲಿ (ಅಪರಾಧ ನಡೆದಾಗ ಪ್ರೌಢನಾಗಿರಲಿಲ್ಲ) ಪ್ರಶ್ನಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದರು.

3.00: 'ನೀವು ತೀರ್ಪು ಮರುಪರೀಶಲನೆ ಮಾಡಬೇಕೆಂದು ಹೇಳುತ್ತಿದ್ದೀರಿ' ಎಂದು ವಕೀಲ ಎ.ಪಿ.ಸಿಂಗ್ ಅವರಿಗೆನ್ಯಾಯಮೂರ್ತಿ ಭೂಷಣ್‌ ಪ್ರತಿಕ್ರಿಯೆ

2.58: ಎ.ಪಿ.ಸಿಂಗ್ ವಾದಕ್ಕೆ ನಾಯಮೂರ್ತಿ ಭೂಷಣ್ ಪ್ರತಿಕ್ರಿಯೆ. ಈ ಎಲ್ಲ ವಿಚಾರಗಳನ್ನು ನೀವು ಈ ಮೊದಲೇ ಮಂಡಿಸಿದ್ದಿರಿ. ದಾಖಲೆಗಳನ್ನೂ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದೀರಿ ಎಂದ ನ್ಯಾಯಮೂರ್ತಿ ಭೂಷಣ್.

2.56: ಅಪರಾಧಿ ಪವನ್‌ ಗುಪ್ತಾ ಪರವಾಗಿ ವಾದ ಮಂಡನೆ ಆರಂಭಿಸಿದ ಎ.ಪಿ.ಸಿಂಗ್. ತನ್ನ ಕಕ್ಷಿದಾರ ಅಪರಾಧ ನಡೆದಾಗ ಪ್ರೌಢನಾಗಿರಲಿಲ್ಲ ಎಂಬುದನ್ನು ಪರಿಗಣಿಸಬೇಕೆಂದು ಮನವಿ.

2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದವಿನಯ್ ಶರ್ಮ, ಮುಕೇಶ್‌ ಕುಮಾರ್ ಸಿಂಗ್, ಪವನ್ ಗುಪ್ತಾ ಮತ್ತು ಅಕ್ಷಯ್ ಸಿಂಗ್ ಅವರಿಗೆಶುಕ್ರವಾರ ಮುಂಜಾನೆ 5.30ಕ್ಕೆಗಲ್ಲು ಶಿಕ್ಷೆ ಜಾರಿ ಮಾಡುವಂತೆ ನ್ಯಾಯಾಲಯ ಡೆತ್ ವಾರಂಟ್ ಜಾರಿ ಮಾಡಿತ್ತು.

ಈ ಆದೇಶದ ಮರುಪರಿಶೀಲನೆಗೆ ಒತ್ತಾಯಿಸಿ ಅಪರಾಧಿಗಳು ಗುರುವಾರ ರಾತ್ರಿ 10.30ಕ್ಕೆ ದೆಹಲಿ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಇವರ ಅರ್ಜಿಯನ್ನು ವಜಾ ಮಾಡಿತ್ತು.

(ಮತ್ತಷ್ಟು ಮಾಹಿತಿ ಶೀಘ್ರ ಅಪ್‌ಡೇಟ್ ಆಗಲಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.