ADVERTISEMENT

ನ್ಯಾಯಾಲಯದ ತೀರ್ಪು ಸ್ವಾಗತಿಸಿದ ನಿರ್ಭಯಾ ತಾಯಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 10:10 IST
Last Updated 5 ಫೆಬ್ರುವರಿ 2020, 10:10 IST
ನಿರ್ಭಯಾ ತಾಯ ಆಶಾದೇವಿ
ನಿರ್ಭಯಾ ತಾಯ ಆಶಾದೇವಿ    

ನವದೆಹಲಿ: ದೆಹಲಿ ಗ್ಯಾಂಗ್‌ ರೇಪ್‌ ಅಪರಾಧಿಗಳುಇನ್ನೊಂದು ವಾರದಲ್ಲಿ ತಮ್ಮ ಕಾನೂನಾತ್ಮಕ ಹೋರಾಟಗಳನ್ನು ಪೂರ್ಣಗೊಳಿಸಬೇಕು ಎಂಬ ದೆಹಲಿ ಹೈಕೋರ್ಟ್‌ನ ಬುಧವಾರದ ತೀರ್ಪನ್ನು ನಿರ್ಭಯಾ ತಾಯಿ ಆಶಾ ದೇವಿ ಸ್ವಾಗತಿಸಿದ್ದಾರೆ.

ಈ ಕುರಿತು ಕೋರ್ಟ್‌ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಶಾ ದೇವಿ, ‘ ದೆಹಲಿ ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಕಾನೂನಿನಲ್ಲಿ ಇರುವ ಎಲ್ಲ ಅವಕಾಶಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಕೋರ್ಟ್‌ ಅಪರಾಧಿಗಳಿಗೆ ತಿಳಿಸಿದೆ. ಕಾನೂನಿನ ದಾರಿಗಳೆಲ್ಲವೂ ಪೂರ್ಣಗೊಂಡ ನಂತರ ಅಪರಾಧಿಗಳಿಗೆ ಶೀಘ್ರವೇ ಶಿಕ್ಷೆ ಜಾರಿಯಾಗಲಿದೆ,’ ಎಂದು ನಿರ್ಭಯಾ ತಾಯಿ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಭಯಾ ಅತ್ಯಾಚಾರಿಗಳು ತಮಗಿರುವ ಕಾನೂನಿನ ಅವಕಾಶಗಳನ್ನು ಇನ್ನೊಂದು ವಾರದಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಅರ್ಜಿ ಇದ್ದರೂ ಅದನ್ನು ಇಂದಿನಿಂದ ಒಂದು ವಾರದೊಳಗೆ ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್‌ ಬುಧವಾರ ತಿಳಿಸಿತು.

ADVERTISEMENT

ನಿರ್ಭಯಾ ಅತ್ಯಾಚಾರಿಗಳ ಮರಣ ದಂಡಣೆ ಜಾರಿ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ದೆಹಲಿಯ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೇತ್‌ ಅವರಿದ್ದ ಪೀಠ, ‘ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ, ಅಪರಾಧಿಗಳು ತಮ್ಮೆಲ್ಲ ಅವಕಾಶಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು,’ ಎಂದು ಸೂಚಿಸಿತು.

ಅಲ್ಲದೆ, ಪ್ರಕರಣ ಆರೋಪಿಗಳನ್ನು ಒಟ್ಟಾಗಿಯೇ ಗಲ್ಲಿಗೇರಿಸಬೇಕು. ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಶಿಕ್ಷೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಒಂದು ಪ್ರಕರಣದ ಆರೋಪಿಗಳ ಪೈಕಿ, ಒಬ್ಬ ಆರೋಪಿಯ ದಯಾ ಅರ್ಜಿ ಬಾಕಿ ಇರುವಾಗ ಇನ್ನುಳಿದವರಿಗೆ ಶಿಕ್ಷೆ ಜಾರಿ ಮಾಡಬಹುದು ಎಂದು ಕಾನೂನಿನಲ್ಲಿ ಹೇಳಿಲ್ಲ ಎಂದು ಕೋರ್ಟ್‌ ತಿಳಿಸಿತು. ಹೀಗಾಗಿ ಎಲ್ಲರನ್ನೂ ಒಟ್ಟಿಗೇ ಶಿಕ್ಷೆಗೆ ಗುರಿಪಡಿಸಬೇಕು ಎಂದಿತು.

ವಿಳಂಬ ತಂತ್ರ ಅನುಸರಿಸುವ ಮೂಲಕ ಅಪರಾಧಿಗಳು ನ್ಯಾಯದಾನ ಪ್ರಕ್ರಿಯೆಯನ್ನೇ ನಿರಾಶೆಗೆ ದೂಡಿದ್ದಾರೆ ಎಂಬುದು ನಿರ್ವಿವಾದ ಎಂದೂ ಕೋರ್ಟ್‌ ಹೇಳಿದೆ. ಅಲ್ಲದೆ,

ಮುಕೇಶ್‌ ಕುಮಾರ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಕುಮಾರ್‌ ಶರ್ಮಾ, ಆಕ್ಷಯ್‌ ಕುಮಾರ್‌ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು.

ಆರೋಪಿಗಳ ಪೈಕಿ ವಿನಯ್‌ ಶರ್ಮಾ ಎಂಬಾತ ರಾಷ್ಟ್ರಪತಿಗಳಲ್ಲಿ ದಯಾ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ದೆಹಲಿ ಸ್ಥಳೀಯ ನ್ಯಾಯಾಲಯ ಶಿಕ್ಷೆ ಜಾರಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ವಿನಯ್‌ ಶರ್ಮಾ ದಯಾ ಅರ್ಜಿಯನ್ನು ತಳ್ಳಿ ಹಾಕುತ್ಲತೇ, ಆಕ್ಷಯ್‌ ಸಿಂಗ್‌ ಎಂಬಾತ ದಯಾ ಅರ್ಜಿ ಸಲ್ಲಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.