ನವದೆಹಲಿ: ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಕ್ಕಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರನ್ನು ಕ್ಷಮಿಸುವಂತೆ ಸಲಹೆ ನೀಡಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ನಿರ್ಭಯಾ ತಾಯಿ ಕಿಡಿ ಕಾರಿದ್ದಾರೆ.
‘ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಳಿನಿಯನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದಾರೆ. ಇದರಿಂದ ನಳಿನಿ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ ಅನುಭವಿಸುವಂತೆ ಆಯಿತು. ಇದೇ ಮಾದರಿಯನ್ನು ಅನುಸರಿಸಿ ಅಪರಾಧಿಗಳನ್ನು ನಿರ್ಭಯಾಳ ತಾಯಿ ಕ್ಷಮಿಸಬೇಕು’ ಎಂದು ಇಂದಿರಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
‘ನಿರ್ಭಯಾಳ ತಾಯಿ ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗುತ್ತದೆ. ನಾವು ಅವರೊಂದಿಗೆ ಇದ್ದೇವೆ. ಆದರೆ, ಮರಣ ದಂಡನೆ ವಿರೋಧಿಸುತ್ತೇವೆ’ ಎಂದೂ ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನಿರ್ಭಯಾ ತಾಯಿ, ‘ನನಗೆ ಈ ರೀತಿ ಸಲಹೆ ನೀಡಲು ಇಂದಿರಾ ಜೈಸಿಂಗ್ ಅವರಿಗೆ ಎಷ್ಟು ಧೈರ್ಯ’ ಎಂದು ಪ್ರಶ್ನಿಸಿದ್ದಾರೆ.
‘ಸುಪ್ರೀಂಕೋರ್ಟ್‌ನಲ್ಲಿ ಇಂದಿರಾ ಅವರನ್ನು ಸಾಕಷ್ಟು ಸಲ ನಾನು ಭೇಟಿಯಾಗಿದ್ದೇನೆ. ಅವರು ಒಮ್ಮೆಯೂ ನನ್ನ ಯೋಗಕ್ಷೇಮವನ್ನು ವಿಚಾರಿಸಿಲ್ಲ. ಆದರೆ, ಈಗ ಏಕಾಏಕಿ ಅಪರಾಧಿಗಳ ಪರ ವಕಾಲತ್ತು ವಹಿಸಿ, ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅತ್ಯಾಚಾರ ಮಾಡಿದವರನ್ನು ಬೆಂಬಲಿಸುವ ಮೂಲಕವೇ ಇಂಥವರು ಬದುಕು ಕಟ್ಟಿಕೊಳ್ಳುತ್ತಾರೆ. ಹೀಗಾಗಿ, ಅತ್ಯಾಚಾರದಂತಹ ಘಟನೆಗಳು ಕಡಿಮೆಯಾಗುತ್ತಿಲ್ಲ’ ಎಂದೂ ಹೇಳಿದರು.
‘ನನಗೆ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಇಡೀ ದೇಶವೇ ಬಯಸುತ್ತಿದೆ. ಇಂತಹ ವ್ಯಕ್ತಿಗಳಿಂದಾಗಿ ಅತ್ಯಾಚಾರ ಸಂತ್ರಸ್ತರಿಗೆ, ಅವರ ಕುಟುಂಬದವರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ನಾಲ್ವರು ಅಪರಾಧಿಗಳನ್ನು ಫೆ.1ರಂದು ಗಲ್ಲಿಗೇರಿಸಲು ದೆಹಲಿ ಕೋರ್ಟ್ ಶುಕ್ರವಾರ ಹೊಸದಾಗಿ ವಾರಂಟ್ ಜಾರಿ ಮಾಡಿದೆ.
ಪವನ್ ಅರ್ಜಿ ವಿಚಾರಣೆ ನಾಳೆ
ಅಪರಾಧಿಗಳ ಪೈಕಿ ಒಬ್ಬನಾಗಿರುವ ಪವನ್‌ಕುಮಾರ್ ಗುಪ್ತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜ. 20ರಂದು ಕೈಗೆತ್ತಿಕೊಳ್ಳಲಿದೆ.
ಅಪರಾಧ ಕೃತ್ಯ ನಡೆದ ಸಂದರ್ಭದಲ್ಲಿ ನಾನು ಬಾಲಕನಿದ್ದೆ. ನನ್ನ ಈ ವಾದವನ್ನು ಪರಿಗಣಸದೇ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ’ ಎಂದಿರುವ ಗುಪ್ತಾ, ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾನೆ.
*
ನನ್ನ ಮಗಳ ಸಾವಿಗೆ ಕಾರಣರಾದವರನ್ನು ಕ್ಷಮಿಸಬೇಕು ಎನ್ನುತ್ತಿರುವ ಇಂದಿರಾ ಜೈಸಿಂಗ್‌ಗೆ ನಾಚಿಕೆಯಾಗಬೇಕು. ಸೋನಿಯಾ ಗಾಂಧಿ ಅವರಷ್ಟು ಹೃದಯ ವೈಶಾಲ್ಯ ನಮಗಿಲ್ಲ.
-ನಿರ್ಭಯಾಳ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.