ನವದೆಹಲಿ: ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ಕು ಮಂದಿ ಆರೋಪಿಗಳಿಗೆ ಶುಕ್ರವಾರಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಲು ತಿಹಾರ್ ಜೈಲಿನ ಸಿಬ್ಬಂದಿ ಅಂತಿಮ ಸಿದ್ಧತೆ ನಡೆಸಿದ್ದಾರೆ.
ಶುಕ್ರವಾರ 5.30ಕ್ಕೆ ಸರಿಯಾಗಿ ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮರನ್ನು ಜೈಲಿನ ಒಳಭಾಗದಲ್ಲಿ ಗಲ್ಲಿಗೇರಿಸಲು ಅಂತಿಮ ವಿಧಿವಿಧಾನಗಳು ನಡೆದಿವೆ.ಇದರಿಂದಾಗಿ ನಾಲ್ಕು ಮಂದಿ ಅಪರಾಧಿಗಳು ಗುರುವಾರ ಬೆಳಿಗ್ಗೆಯಿಂದ ಮೌನಕ್ಕೆ ಶರಣಾಗಿದ್ದಾರೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.
ಪವನ್ ಜಲ್ಲದ್ ಕೈಯಲ್ಲಿ ನೇಣು
ಪವನ್ ಜಲ್ಲದ್ ಎಂಬ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾರಾಗೃಹ ಇಲಾಖೆಯಿಂದ ಗಲ್ಲಿಗೇರಿಸಲೆಂದೇ ಕರೆಸಲಾಗಿದೆ.ಕಾರಾಗೃಹದ ಸಿಬ್ಬಂದಿ ಬುಧವಾರ ಬೆಳಿಗ್ಗೆ ಅವರನ್ನು ಗಲ್ಲಿಗೇರಿಸುವ ಸ್ಥಳಕ್ಕೆ ಕರೆದೊಯ್ದು ಗಲ್ಲಿಗೇರಿಸುವ ಸ್ಥಳವನ್ನು ಪರಿಶೀಲಿಸಿದ್ದಾರೆ.ಅಲ್ಲದೆ, ಗುರುವಾರ ಬೆಳಿಗ್ಗೆಯೂ ಅದೇ ಜಾಗಕ್ಕೆ ಕರೆದೊಯ್ಯಲಾಗಿತ್ತು. ಗಲ್ಲಿಗೇರಿಸಲು 10 ಹಗ್ಗಗಳನ್ನು ಬಕ್ಸರ್ ಮತ್ತು ಬಿಹಾರದಿಂದ ತರಿಸಲಾಗಿದೆ. ಅವುಗಳಲ್ಲಿ ಒಂದನ್ನು ಪರೀಕ್ಷಿಸಲಾಗುವುದು.
ಪವನ್ ಜಲ್ಲದ್‌ಗೆಒಬ್ಬ ಅಪರಾಧಿಯನ್ನು ಗಲ್ಲಿಗೇರಿಸಲು ₹15 ಸಾವಿರ ನಿಗದಿಪಡಿಸಲಾಗಿದೆ. ನಾಲ್ಕು ಮಂದಿಯನ್ನು ಒಂದೇ ದಿನಗಲ್ಲಿಗೇರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಶುಕ್ರವಾರ ಕಾರಾಗೃಹದ ಅಧೀಕ್ಷಕ ಹಾಗೂ ಕಾರಾಗೃಹದ ವೈದ್ಯರು ಮಾತ್ರ ಈ ಸಮಯದಲ್ಲಿ ಸ್ಥಳದಲ್ಲಿ ಹಾಜರಿರುತ್ತಾರೆ.ಕಾರಾಗೃಹದ ಅಧೀಕ್ಷಕರು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದು, ಅಪರಾಧಿಗಳಿಗೆ ಕೊನೆಯ ಇಚ್ಛೆಯನ್ನು ವ್ಯಕ್ತಪಡಿಸಲು ಅವಕಾಶ ನೀಡಲಿದ್ದಾರೆ. ಅಪರಾಧಿಗಳಿಗೆ ಕಾರಾಗೃಹದಿಂದ ತರಬೇತಿ ಪಡೆದಿರುವ ಸಿಬ್ಬಂದಿಯೊಂದಿಗೆ ಅಂತಿಮಮಾತುಕತೆ ನಡೆಸಲು ಅವಕಾಶ ನೀಡಲಾಗುವುದು. ಬೆಳಿಗ್ಗೆ 6.30ರ ಒಳಗೆ ಗಲ್ಲಿಗೇರಿಸುವ ಎಲ್ಲಾ ಕ್ರಿಯೆಗಳು ಮುಗಿಯಲಿವೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅತ್ಯಾಚಾರ ಅಪರಾಧಿಗಳನ್ನು ತಿಹಾರ್ ಜೈಲಿನ ಕಾರಾಗೃಹಕೊಠಡಿ ಸಂಖ್ಯೆ 3ರಲ್ಲಿ ಇಡಲಾಗಿದೆ. ನಾಲ್ಕು ಮಂದಿಯನ್ನೂ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಪ್ರತಿಯೊಂದು ಕೊಠಡಿಗೂ 2 ರಿಂದ 3 ಮಂದಿ ಕಾರಾಗೃಹ ಸಿಬ್ಬಂದಿ ದಿನದ 24 ಗಂಟೆಯೂಕಾವಲು ಇಡಲಾಗಿದೆ. ಬುಧವಾರದವರೆಗೂ ನಾಲ್ಕು ಮಂದಿಯಲ್ಲಿ ಯಾರೊಬ್ಬರೂ ಭಯಪಟ್ಟುಕೊಂಡಂತೆ ಇರಲಿಲ್ಲ. ಮಾಮೂಲಿನಂತೆಯೂ ಇದ್ದರು. ಆದರೆ, ಗುರುವಾರ ಬೆಳಿಗ್ಗೆಯಿಂದ ಮೌನವಾಗಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಕೆಲ ದಿನಗಳಿಂದಲೂ ಅವರ ಮುಖದಲ್ಲಿ ಯಾವುದೇ ಭಯ, ಪಶ್ಚಾತಾಪ ಇರುವಂತೆ ಕಂಡು ಬಂದಿರಲಿಲ್ಲ. ಅಲ್ಲದೆ, ಗಲ್ಲಿಗೇರಿಸುವ ಪ್ರಕ್ರಿಯೆಯನ್ನು ಎರಡು ಬಾರಿ ಮುಂದೂಡಲಾಯಿತು. ಆಗಲೂ ಅವರ ಮುಖದಲ್ಲಿ ಯಾವುದೇ ರೀತಿ ಒತ್ತಡ ಇರುವುದು ಕಂಡುಬರಲಿಲ್ಲ. ಕಾರಾಗೃಹದ ಸಿಬ್ಬಂದಿಯೊಂದಿಗೆ ಯಾರೂಮಾತನಾಡುತ್ತಿಲ್ಲ. ಕಾರಾಗೃಹದ ಸಿಬ್ಬಂದಿ ಅಪರಾಧಿಗಳ ಎಲ್ಲಾ ಅರ್ಜಿಗಳ ವಿಚಾರಣೆಗಳನ್ನು ಗಮನಿಸುತ್ತಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಎರಡನೆ ಬಾರಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ರಾಷ್ಟ್ರಪತಿಗಳು ಅವರ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ನಾಲ್ಕು ಮಂದಿ ಅಪರಾಧಿಗಳು ಚಲಿಸುವ ಬಸ್ಸಿನಲ್ಲಿಯೇ 23 ವಯಸ್ಸಿನ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಹಲ್ಲೆ ನಡೆಸಿದ್ದರು. ತೀವ್ರ ಗಾಯಗಳಾಗಿದ್ದ
ಯುವತಿಯನ್ನು ಸಿಂಗಪೂರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು.
ತಿಹಾರ್ ಜೈಲಿನಲ್ಲಿ 2013ರ ಫೆಬ್ರವರಿ 9ರಂದು ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿತ್ತು.
ಗಲ್ಲು ಶಿಕ್ಷೆ ಖಚಿತ
ಶುಕ್ರವಾರ ಬೆಳಗ್ಗೆ 5.30ಕ್ಕೆ ನಾಲ್ಕು ಮಂದಿ ಅತ್ಯಾಚಾರ ಅಪರಾಧಿಗಳಿಗೆ ಗಲ್ಲಿಗೇರಿಸುವುದು ಖಚಿತ ಎಂದು ನಿರ್ಭಯಾ ಪರ ವಕೀಲರು ತಿಳಿಸಿದ್ದಾರೆ.ವಕೀಲೆ ಸೀಮಾ ಖುಷ್ವಂತ್ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
ಈ ಮಧ್ಯೆ ದೆಹಲಿಯ ಪಾಟಿಯಾಲ ಹೈಕೋರ್ಟ್ ಆರೋಪಿಯೊಬ್ಬನ ಕ್ಷಮಾಧಾನದ ಅರ್ಜಿಯನ್ನು ವಜಾ ಮಾಡಿದೆ. ಅಂತಿಮ ಕ್ಷಣದವರೆಗೂ ಆರೋಪಿಗಳು ಕ್ಷಮಾಧಾನಕ್ಕಾಗಿ ಪ್ರಯತ್ನಿಸುತ್ತಲೇ ಇದ್ದಾರೆ.ಆರೋಪಿಗಳು ನ್ಯಾಯಾಲಯ ನೀಡಿದ್ದ ಡೆತ್ ವಾರೆಂಟ್ ತಡೆ ಕೋರಿದ್ದರು. ಆದರೆ, ಎಲ್ಲಾ ನ್ಯಾಯಾಲಯಗಳು ಅಪರಾಧಿಗಳ ಅರ್ಜಿಗಳನ್ನು ತಿರಸ್ಕರಿಸಿ ಆದೇಶಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.