ನವದೆಹಲಿ: ನನಗೆ ರಾಜಕೀಯ ಇಷ್ಟವಿಲ್ಲ. ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದವರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ನಿರ್ಭಯಾ ತಾಯಿ ಆಶಾದೇವಿ ಸ್ಪಷ್ಟಪಡಿಸಿದ್ದಾರೆ.
'ನಾನು ಕಾಂಗ್ರೆಸ್‌ನ ಯಾವ ನಾಯಕರೊಂದಿಗೂ ಮಾತನಾಡಿಲ್ಲ. ರಾಜಕೀಯ ಸೇರುವ ಬಗ್ಗೆ ಬರುತ್ತಿರುವ ವರದಿಗಳ ಬಗ್ಗೆ ಏನೂ ಗೊತ್ತಿಲ್ಲ,’ ಎಂದು ಅವರು ದೆಹಲಿ ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರಿಗೆ ತಿಳಿಸಿದರು.
‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನಾನು ನನ್ನ ಮಗಳ ಬೆಂಬಲಕ್ಕೆ ನಿಂತಿದ್ದೇನೆ. ಇತರ ಸಂತ್ರಸ್ತ ಹೆಣ್ಣುಮಕ್ಕಳಿಗಾಗಿ ಹೋರಾಡುತ್ತಿದ್ದೇನೆ. ನನ್ನ ಮಗಳಿಗೆ ನ್ಯಾಯ ಒದಗಿಸಲು ನಾನು ಹೋರಾಟ ಮಾಡುತ್ತಿದ್ದೇನೆ. ನಾಲ್ವರೂ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ನಾನು ನೋಡಬೇಕಿದೆ,’ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಕಾಂಗ್ರೆಸ್‌ನ ಚುನಾವಣೆ ಉಸ್ತುವಾರಿಯಾಗಿರುವ ಕೀರ್ತಿ ಆಜಾದ್ ಅವರು ಶುಕ್ರವಾರ ಟ್ವೀಟ್ ಮಾಡಿ, ‘ಆಶಾ ದೇವಿ ಅವರಿಗೆ ಸ್ವಾಗತ,’ ಎಂದು ಬರೆದುಕೊಂಡಿದ್ದರು. ಇದನ್ನೇ ಆದಾರವಾಗಿಟ್ಟುಕೊಂಡ ಕೆಲ ಮಾಧ್ಯಮಗಳು, ನಿರ್ಭಯಾ ತಾಯಿ ಆಶಾದೇವಿ ಅವರು ಕಾಂಗ್ರೆಸ್ ಸೇರಿ, ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವುದಾಗಿ ವರದಿ ಮಾಡಿದ್ದವು.
ಆದರೆ, ಅಂಥ ಸಾಧ್ಯತೆಗಳನ್ನು ಆಶಾದೇವಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾಳನ್ನು 2012ರ ಡಿ. 16ರಂದು ಚಲಿಸುವ ಬಸ್‌ನಲ್ಲೇ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳು ಆಕೆಯ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದರು. ಚಿಕಿತ್ಸೆ ಫಲಿಸದೇ ಡಿ. 29ರಂದು ನಿರ್ಭಯಾ ಕೊನೆಯುಸಿರೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.