ಕೇರಳ: ದೇವಸ್ಥಾನದಲ್ಲಿ ಆಯತಪ್ಪಿ ಬಿದ್ದುಗಾಯಗೊಂಡಿರುವ ಕಾಂಗ್ರೆಸ್ಸಂಸದ ಶಶಿತರೂರ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಆಸ್ಪತ್ರೆಯಲ್ಲಿಭೇಟಿ ಮಾಡಿ ಆರೋಗ್ಯಸ್ಥಿತಿಯ ಬಗ್ಗೆ ವಿಚಾರಿಸಿದರು.
ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಚಿವೆ ನಿರ್ಮಲಾ ಅವರು ತರೂರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಶಶಿತರೂರ್ ಕೇರಳದ ಜನಪ್ರಿಯ ಹಬ್ಬವಾದ 'ವಿಶು' ಆಚರಣೆಯ ಪ್ರಯುಕ್ತ ಸೋಮವಾರ ದೇವಸ್ಥಾನದಲ್ಲಿ ತುಲಾಭಾರ ಹರಕೆ ಸಲ್ಲಿಸುತ್ತಿದ್ದಾಗ ಆಯತಪ್ಪಿ ಬಿದ್ದು ತಲೆಗೆ ಗಾಯವಾಗಿತ್ತು.ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೇಟಿ ಸಮಯದಲ್ಲಿ ಇಬ್ಬರೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಮೂರು ಬಾರಿ ತಿರುವನಂತಪುರದಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಸಂಸದ ಶಶಿತರೂರ್ ಕೇರಳದ ತಮ್ಮ ನಿವಾಸದಲ್ಲಿ ವಿಶು ಆಚರಿಸುತ್ತಿದ್ದರು. ಸಂಬಂಧಿಕರೊಂದಿಗೆ ಹಬ್ಬ ಆಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.
ಈ ಭೇಟಿಯ ಕುರಿತು ಟ್ವೀಟ್ ಮಾಡಿರುವ ಶಶಿತರೂರ್, ಇಂತಹ ನಡೆ ಭಾರತೀಯ ರಾಜಕಾರಣದಲ್ಲಿ ಅಪರೂಪ, ಇಷ್ಟು ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿಯೂ ನನ್ನನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದು ಅವರ ದೊಡ್ಡಗುಣ,ಇದು ನಿರ್ಮಲಾ ಸೀತಾರಾಮನ್ ಅವರ ಮಾನವೀಯ ಗುಣವನ್ನು ತೋರುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.