ADVERTISEMENT

ಮಹಾರಾಷ್ಟ್ರದ ಅಲೀಭಾಗ್‌ ಕರಾವಳಿಗೆ ಅಪ್ಪಳಿಸಿದ ನಿಸರ್ಗ ಚಂಡಮಾರುತ

ಏಜೆನ್ಸೀಸ್
Published 3 ಜೂನ್ 2020, 10:56 IST
Last Updated 3 ಜೂನ್ 2020, 10:56 IST
ಅಲೀಭಾಗ್‌ನಲ್ಲಿ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುತ್ತಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ –ಎಎಫ್‌ಪಿ ಚಿತ್ರ
ಅಲೀಭಾಗ್‌ನಲ್ಲಿ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುತ್ತಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ –ಎಎಫ್‌ಪಿ ಚಿತ್ರ   

ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ಉತ್ತರ ಕರಾವಳಿ ಅಲೀಭಾಗ್‌ಗೆ (ರಾಯ್‌ಗಢ) ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಮೂರು ಗಂಟೆಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಭಾರಿ ತೀವ್ರತೆಯ ಗಾಳಿ, ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.

ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಕರಾವಳಿಗೆ ಚಂಡಮಾರುತ ಅಪ್ಪಳಿಸುತ್ತಿದೆ. ನಿಸರ್ಗ ಚಂಡಮಾರುತ ಪ್ರಭಾವದಿಂದ ಗಂಟೆಗೆ ಸುಮಾರು 120 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.

ನಿಸರ್ಗ ಚಂಡಮಾರುತವು ಮಹಾರಾಷ್ಟ್ರ ಕರಾವಳಿ ತಲುಪಿದೆ. ಚಂಡಮಾರುತದ ಅಪ್ಪಳಿಸುವಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಮುಂದಿನ ಮೂರು ಗಂಟೆಗಳಲ್ಲಿ ಇದು ಪೂರ್ಣಗೊಳ್ಳಬಹುದು. ಚಂಡಮಾರುತದ ಪ್ರಭಾವ ಮುಂದಿನ ಕೆಲವು ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಬಹುದು. ತಗ್ಗು ಪ್ರದೇಶಗಳಲ್ಲಿರುವ ಎಚ್ಚರವಹಿಸಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ADVERTISEMENT

ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಭಾರತೀಯ ನೌಕಾಪಡೆಯ ತಂಡಗಳನ್ನು ನಿಯೋಜಿಸಲಾಗಿದೆ.

ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಾಚರಣೆಗಾಗಿಮಹಾರಾಷ್ಟ್ರದಾದ್ಯಂತ 20 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನೂ 5 ತಂಡಗಳನ್ನು ವಿಶಾಖಪಟ್ಟಣದಿಂದ ಏರ್‌ಲಿಫ್ಟ್ ಮಾಡಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ಮುಂಬೈಯ ವರ್ಸೋವಾ ಕಡಲ ಕಿನಾರೆಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಭಾರಿ ಗಾಳಿ ಬೀಸುತ್ತಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಬೃಹನ್ಮುಂಬೈ ನಗರ ಪಾಲಿಕೆ ಜಂಟಿಯಾಗಿ ವರ್ಸೋವಾ ಕಡಲ ತೀರ ಪ್ರದೇಶದಲ್ಲಿರುವ ಜನರನ್ನು ಬೆಳಿಗ್ಗೆಯೇ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.