ಕೋಜಿಕ್ಕೋಡ್: ಕೇರಳದ ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಪ್ರಾಧ್ಯಾಪಕಿಯೊಬ್ಬರು ‘ಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂಬ ಫೇಸ್‌ಬುಕ್ ಸಂದೇಶವನ್ನು ಹಂಚಿಕೊಂಡಿದ್ದು, ಅದು ವಿವಾದವನ್ನುಂಟು ಮಾಡಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಎ. ಶೈಜಾ ಎನ್ನುವವರ ಮೇಲೆ ಈ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ವಕೀಲ ಕೃಷ್ಣ ರಾಜ್ ಎನ್ನುವರು ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರಕ್ಕೆ ಎ. ಶೈಜಾ ಅವರು, ‘ಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ಕಾಮೆಂಟ್ ಹಾಕಿದ್ದರು.
ಈ ಕಾಮೆಂಟ್ ವಿವಾದದ ಸ್ವರೂಪವನ್ನು ಪಡೆದುಕೊಂಡ ನಂತರ ಅನೇಕ ಎಡಪರ ಸಂಘಟನೆಗಳು ಕೇರಳದಲ್ಲಿ ಶೈಜಾ ಅವರ ವಿರುದ್ಧ ದೂರು ದಾಖಲಿಸಿವೆ.
ಇನ್ನೊಂದೆಡೆ ಶೈಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎನ್‌ಐಟಿ ಕ್ಯಾಂಪಸ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದೆ.
ಕಾಲೇಜಿನಲ್ಲಿ ಶೈಜಾ ವಿರುದ್ಧ ಮೆರವಣಿಗೆ ನಡೆಸಿ, ಗೋಡ್ಸೆ ಪ್ರತಿಕೃತಿ ದಹನ ಮಾಡಿದೆ. ಅವರನ್ನು ಎನ್‌ಐಟಿಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ.
ಕುನ್ನಮಂಗಳಂ, ನಾಡಕ್ಕಾವು ಸೇರಿದಂತೆ ಕೆಲವು ಪೊಲೀಸ್ ಠಾಣೆಗಳಲ್ಲಿ ಶೈಜಾ ವಿರುದ್ಧ ಐಪಿಸಿ ಸೆಕ್ಷನ್ 153 ಅಡಿ ದೂರು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.