ADVERTISEMENT

ಮಹಿಳೆಯರ ಕುರಿತು ಹೇಳಿಕೆ: ಬಿಹಾರ ಸಿಎಂ ನಿತೀಶ್ ಕುಮಾರ್ ಕ್ಷಮೆಯಾಚನೆ

ಪಿಟಿಐ
Published 8 ನವೆಂಬರ್ 2023, 6:32 IST
Last Updated 8 ನವೆಂಬರ್ 2023, 6:32 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ಜನಸಂಖ್ಯೆಯ ಏರಿಕೆಯ ನಿಯಂತ್ರಣ ಮತ್ತು ಮಹಿಳೆಯರಿಗೆ ಶಿಕ್ಷಣ ನೀಡುವುದರ ಬಗ್ಗೆ ತಾವು ಆಡಿದ ಮಾತುಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಬುಧವಾರ ಕ್ಷಮೆ ಯಾಚಿಸಿದ್ದಾರೆ. ನಿತೀಶ್ ಕುಮಾರ್ ಅವರ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ನಿತೀಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ವಿರೋಧ ಪಕ್ಷಗಳು ಸದನದಲ್ಲಿ ಧರಣಿ ನಡೆಸಿದ್ದವು.

‘ಹೊರಗಡೆ ಪತ್ರಕರ್ತ ಬಳಿ ಮಾತನಾಡುವಾಗ, ನನ್ನ ಮಾತುಗಳು ನಿಂದನಾತ್ಮಕ ಎಂದಾಗಿದ್ದರೆ ನಾನು ಕ್ಷಮೆ ಯಾಚಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದೇನೆ. ಯಾರನ್ನೂ ನಿಂದಿಸುವ ಉದ್ದೇಶ ನನ್ನದಲ್ಲವಾಗಿತ್ತು. ನಾನು ನನ್ನನ್ನೇ ಖಂಡಿಸಿಕೊಳ್ಳುವೆ’ ಎಂದು ನಿತೀಶ್ ಅವರು ವಿಧಾನಸಭೆಯಲ್ಲಿ ಹೇಳಿದರು. ತಮ್ಮ ಹೇಳಿಕೆ ಕುರಿತು ಅವರು ವಿಧಾನ ಪರಿಷತ್ತಿನಲ್ಲಿಯೂ ಕ್ಷಮೆ ಯಾಚಿಸಿದರು.

‘ನಿತೀಶ್ ಅವರು ಮೆಂಟಲ್ ಕೇಸ್ ಆಗಿದ್ದಾರೆ. ರಾಜ್ಯವನ್ನು ಆಳುವ ಸಾಮರ್ಥ್ಯ ಅವರಿಗಿಲ್ಲ. ಅವರು ರಾಜೀನಾಮೆ ನೀಡಬೇಕು’ ಎಂದು  ವಿರೋಧ ಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಿಸಿದರು.

ADVERTISEMENT

ವಿಧಾನಸಭೆಯ ಸ್ಪೀಕರ್ ಎದುರಿನ ಅಂಗಳಕ್ಕೆ ನುಗ್ಗಿದ ಬಿಜೆಪಿ ಸದಸ್ಯರು ನಿತೀಶ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿತೀಶ್ ಕ್ಷಮೆಯಾಚನೆ ವಿರೋಧ ಪಕ್ಷಗಳಿಗೆ ಸಮಾಧಾನ ತರಲಿಲ್ಲ. ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯ ಮುಂದುವರಿಸಿದಾಗ, ಕಲಾಪವನ್ನು ಸ್ಪೀಕರ್ ಮುಂದೂಡಬೇಕಾಯಿತು.

ಮಹಿಳಾ ಆಯೋಗ ಪತ್ರ: ಬಿಹಾರ ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದಿರುವ ರಾಷ್ಟ್ರೀಯ ಮಹಿಳಾ ಆಯೋಗವು, ‘ನಿಂದನಾತ್ಮಕವಾಗಿ ಮಾತನಾಡಿದ್ದಕ್ಕೆ ಹಾಗೂ ಕೆಳಮಟ್ಟದ ಭಾಷೆ ಬಳಸಿದ್ದಕ್ಕೆ ಮುಖ್ಯಮಂತ್ರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಂಥವರು ನಿತೀಶ್ ಮಾತನ್ನು ಖಂಡಿಸಬೇಕು ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಅವರು ಎಕ್ಸ್‌ ವೇದಿಕೆಯಲ್ಲಿ ಬರೆದಿದ್ದಾರೆ.

ನಿತೀಶ್ ಹೇಳಿದ್ದು ಏನು?: ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ನಿತೀಶ್ ಅವರು, ಸುಶಿಕ್ಷಿತ ಮಹಿಳೆಯು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಲ್ಲಳು ಎಂಬುದರ ಚಿತ್ರಣ ನೀಡಿದ್ದರು. ‘ಗಂಡನ ಕೆಲಸಗಳಿಂದಾಗಿ ಹೆಚ್ಚು ಮಕ್ಕಳು ಹುಟ್ಟುತ್ತಿದ್ದರು. ಆದರೆ ಶಿಕ್ಷಣದ ಕಾರಣದಿಂದಾಗಿ, ಗಂಡನನ್ನು ತಡೆಯುವುದು ಹೇಗೆ ಎಂಬುದು ಮಹಿಳೆಗೆ ಗೊತ್ತಾಗಿದೆ. ಹೀಗಾಗಿ ಜನನ ಸಂಖ್ಯೆ ಕಡಿಮೆ ಆಗುತ್ತಿದೆ’ ಎಂದು ನಿತೀಶ್ ಅವರು ಒರಟು ಶೈಲಿಯಲ್ಲಿ ಹೇಳಿದ್ದರು.

ಜನನ ಕ್ರಿಯೆಯ ವಿವರಣೆ ನೀಡುವ ಮೂಲಕ ನಿತೀಶ್ ಅವರು ರಾಜ್ಯದ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಎಡಪಕ್ಷಗಳ ಮಹಿಳಾ ಘಟಕಗಳು ನಿತೀಶ್ ಅವರ ಹೇಳಿಕೆಯನ್ನು ಖಂಡಿಸಿವೆ. ನಿತೀಶ್ ಅವರ ಆಂಗಿಕ ಭಾಷೆಯು ಬಹಳ ಅಶ್ಲೀಲವಾಗಿತ್ತು ಎಂದು ಅವು ಹೇಳಿವೆ.

ರಾಬ್ರಿ ದೇವಿ ಹೇಳಿಕೆ: ಆರ್‌ಜೆಡಿ ನಾಯಕಿ, ವಿಧಾನ ಪರಿಷತ್ ಸದಸ್ಯೆ ರಾಬ್ರಿ ದೇವಿ ಅವರು ಪಿಟಿಐ ವಿಡಿಯೊ ತಂಡದ ಜೊತೆ ಮಾತನಾಡಿ, ‘ನಿತೀಶ್ ಅವರು ಹೇಳಿದ್ದು ಸರಿಯಾದ ಮಾತಲ್ಲ. ಆದರೆ ಅವರು ಕ್ಷಮೆ ಯಾಚಿಸಿರುವ ಕಾರಣ ಆಗಿಹೋಗಿದ್ದನ್ನು ಬಿಟ್ಟುಬಿಡಬೇಕು’ ಎಂದು ಹೇಳಿದ್ದಾರೆ.

ಬಿಜೆಪಿ ಸದಸ್ಯರು ತಾವು ಬಹಳ ಸಭ್ಯರು ಎಂದು ವರ್ತಿಸಬೇಕಾಗಿಲ್ಲ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿದೆ. ಅಲ್ಲಿ ಬಿಜೆಪಿಯ ಆಡಳಿತ ಇದೆ. ಮಣಿಪುರದ ಸ್ಥಿತಿ ಬಗ್ಗೆ ಬಿಜೆಪಿ ನಾಯಕತ್ವ ತಲೆಕೆಡಿಸಿಕೊಂಡಿಲ್ಲ.
–ರಾಬ್ಡಿ ದೇವಿ, ಆರ್‌ಜೆಡಿ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.