ನವದೆಹಲಿ: ಕೇಂದ್ರ ಸರ್ಕಾರವು ‘ಇಂಡಿಯಾ’ ಒಕ್ಕೂಟದ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ನಿಲುವನ್ನು ಖಂಡಿಸಿ ಇದೇ ಶನಿವಾರ ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತ್ರ ಸಭೆಗೆ ಹಾಜರಾಗಲಿದ್ದಾರೆ.
ಮೋದಿ ಸರ್ಕಾರ ಎನ್‌ಡಿಎ ಆಡಳಿತದಲ್ಲಿರುವ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚು ಅನುಕೂಲ ಕಲ್ಪಿಸಿ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳ ಸಂಸದರು, ಬುಧವಾರ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೊದಲಿಗೆ ಸಭೆ ಬಹಿಷ್ಕರಿಸುವುದಾಗಿ ಚೆನ್ನೈನಲ್ಲಿ ಘೋಷಿಸಿದರು. ಆ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣದ ಎ.ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖವೀಂದರ್ ಸಿಂಗ್ ಸುಖು ಅವರು ಕೂಡ ಸಭೆ ಬಹಿಷ್ಕರಿಸುವುದಾಗಿ ತಿಳಿಸಿದರು.
ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಕೇರಳದ ಪಿಣರಾಯಿ ವಿಜಯನ್ ಅವರು ಕೂಡ ಸಭೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋಮವಾರ ನಡೆದ ‘ಇಂಡಿಯಾ’ ಒಕ್ಕೂಟದ ಸದನಗಳ ನಾಯಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಡಿಎಂಕೆಯ ಕನಿಮೋಳಿ ಅವರು ಸ್ಟಾಲಿನ್ ಅವರ ತೀರ್ಮಾನದ ಬಗ್ಗೆ ಮುಖಂಡರ ಗಮನಕ್ಕೆ ತಂದರು.
ಇಂಡಿಯಾ ಒಕ್ಕೂಟದ ಆಡಳಿತ ನಡೆಸುವ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ನೀತಿ ಆಯೋಗದ ಸಭೆ ಬಹಿಷ್ಕರಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಇತರ ಪಕ್ಷಗಳ ಮುಖಂಡರಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯಸಭೆಯಲ್ಲಿ ಟಿಎಂಸಿ ಸದನ ನಾಯಕ ಡೆರೆಕ್ ಒಬ್ರಯನ್ ಅವರು ಹೇಳಿದ್ದಾರೆ.
‘ಬಂಗಾಳದ ಹಕ್ಕುಗಳನ್ನು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಲು ಮತ್ತು ಅದನ್ನು ಹೊಣೆಗಾರರನ್ನಾಗಿ ಮಾಡಲು ನೀತಿ ಆಯೋಗದ ಸಭೆಯ ವೇದಿಕೆಯನ್ನು ನಾವು ಬಳಸಿಕೊಳ್ಳಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.