ಉಜ್ಜೈನಿ: ದೇಹದ ತೂಕ ಇಳಿಸಿಕೊಂಡರೆ ಕ್ಷೇತದ ಅಭಿವೃದ್ಧಿಗೆ ಹಣ ಹಂಚಿಕೆ ಮಾಡುವುದಾಗಿ ಸಂಸದರೊಬ್ಬರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಪ್ರತಿ ಕಿಲೋ ಗ್ರಾಂ ತೂಕ ಇಳಿಕೆಗೆ ₹1,000 ಕೋಟಿ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಇದೀಗ ಆ ಸಂಸದ 15 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ.
ಗಡ್ಕರಿ ಅವರ ಸವಾಲು ಸ್ವೀಕರಿಸಿದ ಮಧ್ಯ ಪ್ರದೇಶದ ಉಜ್ಜೈನಿಯ ಸಂಸದ ಅನಿಲ್ ಫಿರೋಜಿಯಾ, ಈ ವರ್ಷ ಫೆಬ್ರುವರಿಯಿಂದ ಬೊಜ್ಜು ಕರಗಿಸುವ ನಿರಂತರ ಯತ್ನ ನಡೆಸಿದ್ದಾರೆ. ಈ ವರ್ಷದ ಆರಂಭದಲ್ಲಿ ಹಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದ ಗಡ್ಕರಿ, 'ಬೊಜ್ಜು ಕರಗಿಸಿದರೆ ಹಣ ಹಂಚಿಕೆ' ಭರವಸೆ ನೀಡಿದ್ದರು.
ಫೆಬ್ರುವರಿ 127 ಕೆ.ಜಿ ತೂಕವಿದ್ದ ಸಂಸದ ಅನಿಲ್, ಈಗ 15 ಕೆ.ಜಿ. ಕಡಿಮೆ ತೂಗುತ್ತಿದ್ದಾರೆ. 'ನಾನು ಫಿಟ್ ಆಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಗಡ್ಕರಿ ಅವರು ಈ ಘೋಷಣೆ ಮಾಡಿದ್ದರು. ನಾನು ಇಳಿಸಿಕೊಳ್ಳುವ ಪ್ರತಿ ಕಿಲೋ ಗ್ರಾಂ ತೂಕಕ್ಕೆ ₹1,000 ಕೋಟಿಯಂತೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಅವರ ಅಪ್ಪಣೆಯನ್ನು ಸ್ವೀಕರಿಸಿ, ಕಳೆದ ನಾಲ್ಕು ತಿಂಗಳಲ್ಲಿ 15 ಕೆ.ಜಿ. ತೂಕ ಇಳಿಸಿಕೊಂಡಿರುವೆ' ಎಂದು ಅನಿಲ್ ಹೇಳಿದ್ದಾರೆ.
ದೈಹಿಕ ವ್ಯಾಯಾಮಗಳು, ಸೈಕ್ಲಿಂಗ್ ಹಾಗೂ ಯೋಗಾ ಮಾಡುವ ಜೊತೆಗೆ ನಿಯಮಿತಿ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೇನೆ. ಈಗ ನಾನು ಅಭಿವೃದ್ಧಿ ಕಾರ್ಯಗಳಿಗೆ ₹15,000 ಕೋಟಿ ಕೇಳಬಹುದಾಗಿದೆ ಎಂದಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚಿನ ಹಣ ಮೀಸಲು ಪಡೆಯಲು ಮತ್ತಷ್ಟು ತೂಕ ಇಳಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.