ADVERTISEMENT

ಬಿಜೆಪಿ ಶಾಸಕರು, ಸಂಸದರು ಸರಿಯಾಗಿ ಕೆಲಸ ಮಾಡದಿದ್ದರೆ ಅದಕ್ಕೆ ಅಮಿತ್‌ ಶಾ ಹೊಣೆ

ಏಜೆನ್ಸೀಸ್
Published 25 ಡಿಸೆಂಬರ್ 2018, 11:27 IST
Last Updated 25 ಡಿಸೆಂಬರ್ 2018, 11:27 IST
   

ನವದೆಹಲಿ: ‘ಬಿಜೆಪಿ ಶಾಸಕರು ಮತ್ತು ಸಂಸದರ ಕಾರ್ಯಕ್ಷಮತೆ ಸರಿಯಿಲ್ಲದಿದ್ದರೆ ಅದರ ಹೊಣೆಯನ್ನು ಪಕ್ಷದ ಅಧ್ಯಕ್ಷರೇ ಹೊತ್ತುಕೊಳ್ಳಬೇಕು’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ಸಾಲು ಸಾಲು ಹೇಳಿಕೆ ನೀಡುತ್ತಿರುವ ಗಡ್ಕರಿ ಅವರು ಎರಡು ದಿನಗಳ ಹಿಂದಷ್ಟೇ ’ಯಶಸ್ಸಿಗೆ ಹಲವು ತಂದೆಯರಿರುತ್ತಾರೆ, ಸೋಲು ಮಾತ್ರ ಅನಾಥ ಶಿಶು‘ ಎಂದಿದ್ದರು.

ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, ‘ನೀವು ಸೂಕ್ಷ್ಮವಾಗಿ ಗಮನಿಸಿದರೆ, ಗೃಹ ಸಚಿವರ ಯಶಸ್ವಿ ಕೆಲಸಗಳ ಹಿಂದೆ ನುರಿತ ಐಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಇರುತ್ತಾರೆ. ಸಮರ್ಪಕ ತರಬೇತಿ ಹೊಂದಿರುವುದು ಬಹಳ ಮುಖ್ಯ. ಬಹುತೇಕ ಐಪಿಎಸ್ ಮತ್ತು ಐಎಎಸ್‌ ಅಧಿಕಾರಿಗಳು ಪ್ರಾಮಾಣಿಕವಾಗಿದ್ದಾರೆ ಮತ್ತು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ನಾನು ನಂಬಿದ್ದೇನೆ. ನಾನೇನಾದರೂ ಪಕ್ಷದ ಅಧ್ಯಕ್ಷನಾಗಿದ್ದು, ನಮ್ಮ ಪಕ್ಷದ ಶಾಸಕರು ಮತ್ತು ಸಂಸದರು ಸರಿಯಾಗಿ ಕೆಲಸ ಮಾಡದಿದ್ದರೆ ಅದಕ್ಕೆ ನಾನೇ ಹೊಣೆಯಾಗಿರುತ್ತನೆ. ಅವರನ್ನು ಸುಧಾರಿಸಲು ನಾನೇನು ಮಾಡಿದೆ ಎನ್ನುವುದು ಮುಖ್ಯವಾಗುತ್ತದೆ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಪಕ್ಷದ ನಾಯಕತ್ವ ವಿರುದ್ಧ ತೀಕ್ಷ್ಣವಾಗಿ ಟೀಕೆ ಮಾಡಿದ ನಿತಿನ್ ಗಡ್ಕರಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದೇ ವೇಳೆ ಸಹಿಷ್ಣುತೆ ಬಗ್ಗೆ ಮಾತನಾಡಿದ ಅವರು ನೆಹರೂ ಮಾತನ್ನು ಉಲ್ಲೇಖಿಸಿದರು. ‘ಪ್ರತಿಯೊಬ್ಬ ಮನುಷ್ಯನು ತನ್ನಿಂದ ಈ ದೇಶಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಯೋಚಿಸಬೇಕು. ಸಮಸ್ಯೆ ಸೃಷ್ಟಿಸುವುದಿಲ್ಲ ಎಂದು ಪ್ರತಿಯೊಬ್ಬರು ನಿರ್ಧರಿಸಿದರೆ ಅರ್ಧ ಸಮಸ್ಯೆ ಅಲ್ಲಿಯೇ ನಿವಾರಣೆಯಾಗುತ್ತದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.