ಪಟ್ನಾ: 2019 ಲೋಕಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ತಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿತ್ತು ಎಂದು ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಗುರುವಾರ ಆರೋಪಿಸಿದ್ದಾರೆ.
ಚಿರಾಗ್ ಅವರ ತಂದೆ ರಾಮ್‌ವಿಲಾಸ್ ಪಾಸ್ವಾನ್ ಅವರು ಕಳೆದವಾರ ನಿಧನರಾಗಿದ್ದರು. ‘ನನ್ನ ತಂದೆಗೆ ನಿತೀಶ್ ಅಪಮಾನ ಮಾಡಿದ್ದಾರೆ.ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವಾಗ ಜೊತೆಗೆ ಹೋಗುವಂತೆ ಕೇಂದ್ರದ ಮಾಜಿ ಸಚಿವರೊಬ್ಬರು ಕರೆ ಮಾಡಿದಾಗ ನಿತೀಶ್ ಅಹಂಕಾರ ತೋರಿದ್ದರು. ಪಾಸ್ವಾನ್ ಅವರೂ ಕರೆ ಮಾಡಿದ್ದರು. ಆದರೆ ಶುಭಮುಹೂರ್ತ ಮುಗಿದ ಬಳಿಕ ಬಂದಿದ್ದರು’ ಎಂದು ಚಿರಾಗ್ ಆರೋಪಿಸಿದ್ದಾರೆ.
‘ಜೆಡಿಯು ಬೆಂಬಲವಿಲ್ಲದೇ ಎಲ್‌ಜೆಪಿ ಅಭ್ಯರ್ಥಿ ರಾಮ್‌ವಿಲಾಸ್ ಪಾಸ್ವಾನ್ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಸಾಧ್ಯವಿತ್ತೇ’ ಎಂದು ನಿತೀಶ್ ಇತ್ತೀಚೆಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚಿರಾಗ್, ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ರಾಜ್ಯಸಭಾ ಸ್ಥಾನ ನೀಡುವ ವಾಗ್ದಾನ ಮಾಡಿದ್ದರು’ ಎಂದು ನೆನಪಿಸಿದ್ದಾರೆ.
ಸೀಟು ಹೊಂದಾಣಿಕೆ ಸೂತ್ರ ಒಪ್ಪಿಗೆಯಾಗದ ಕಾರಣ ನಿತೀಶ್ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂಬ ಆರೋಪವನ್ನು ಚಿರಾಗ್ ತಳ್ಳಿಹಾಕಿದ್ದಾರೆ. ಗೃಹಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಎಷ್ಟೋ ಬಾರಿ ಭೇಟಿ ಮಾಡಿದ್ದೇನೆ. ಆದರೆ ಸೀಟು ಹೊಂದಾಣಿಕೆ ವಿಷಯ ಚರ್ಚೆಗೇ ಬಂದಿಲ್ಲ’ ಎಂದಿದ್ದಾರೆ. ನಿತೀಶ್ ಅವರಿಗೆ ದೂರದೃಷ್ಟಿ ಇಲ್ಲ. ಅವರು ರಾಜ್ಯವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ್ದಾರೆ ಎಂದೂ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.