ADVERTISEMENT

ನಿತೀಶ್ ಕುಮಾರ್ ನನ್ನ ತಂದೆಯನ್ನು ಅವಮಾನಿಸಿದ್ದಾರೆ: ಚಿರಾಗ್ ಪಾಸ್ವಾನ್

ಏಜೆನ್ಸೀಸ್
Published 10 ಅಕ್ಟೋಬರ್ 2020, 12:39 IST
Last Updated 10 ಅಕ್ಟೋಬರ್ 2020, 12:39 IST
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್   

ಪಾಟ್ನಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಮುಕ್ತ ಪತ್ರದಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಅವಮಾನಿಸಿದ್ದಾರೆ ಎಂದು ಬರೆದಿದ್ದಾರೆ. ಈ ಪತ್ರವನ್ನು ಸೆಪ್ಟೆಂಬರ್ 24 ರಂದು ನಡ್ಡಾ ಅವರಿಗೆ ಬರೆಯಲಾಗಿದ್ದು, ಅಕ್ಟೋಬರ್ 8 ರಂದು ಎಲ್‌ಜೆಪಿ ಬಿಡುಗಡೆ ಮಾಡಿದೆ.

ಪತ್ರದಲ್ಲಿ, ರಾಜ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧದ ಅಲೆ ಇದೆ. ಇದರ ಪರಿಣಾಮವಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಆಡಳಿತವನ್ನು ಕಳೆದುಕೊಳ್ಳಬಹುದು. ಎನ್‌ಡಿಎನ ಉನ್ನತ ನಾಯಕರ ಆಶ್ವಾಸನೆಯ ಹೊರತಾಗಿಯೂ ರಾಜ್ಯಸಭಾ ಸ್ಥಾನದ ವಿಚಾರವಾಗಿ ಬಿಹಾರ ಸಿಎಂ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಅವಮಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಆಗಾಗ್ಗೆ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರೂ ಕೂಡ ಜೆಡಿಯು ಅಧ್ಯಕ್ಷರು ಮಾತ್ರ ಎಲ್‌ಜೆಪಿ ಅಧ್ಯಕ್ಷರ ಅನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಮಾತುಕತೆ ವೇಳೆ ರಾಜ್ಯಸಭೆಯ ಒಂದು ಸ್ಥಾನವನ್ನು ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಬಿಟ್ಟುಕೊಡಬೇಕೆಂಬ ಒಪ್ಪಂದ ನೆಡೆದಿತ್ತು. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆದಿತ್ತು. ಆದರೂ, ಸಾರ್ವತ್ರಿಕ ಚುನಾವಣೆಯ ಸೀಟು ಹಂಚಿಕೆಯ ವೇಳೆ ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಅಪಮಾನ ಮಾಡಿದ್ದರು ಎಂದು ಚಿರಾಗ್ ಹೇಳಿದ್ದಾರೆ.

ADVERTISEMENT

ಅನೇಕ ಬಿಜೆಪಿ ನಾಯಕರು ಕೂಡ ನಿತೀಶ್ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ದೂರಿರುವ ಚಿರಾಗ್, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿರುವಾಗ, ಬಿಹಾರ ಸಿಎಂ ಬಗ್ಗೆ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆಯಿದೆ. ವ್ಯರ್ಥ ಮಾಡಲು ನಮಗೆ ಹೆಚ್ಚು ಸಮಯವಿಲ್ಲ. ಇದು 120 ದಶಲಕ್ಷ ಬಿಹಾರಿಗಳ ಜೀವನ ಮತ್ತು ಸಾವಿನ ಪ್ರಶ್ನೆಯಾಗಿದೆ. 'ಜೆಡಿಯುಗೆ ನೀವು ಪ್ರತಿ ಮತವೂ ನಿಮ್ಮ ಮಕ್ಕಳನ್ನು ಒತ್ತಾಯದ ವಲಸೆಗೆ ದೂಡುತ್ತದೆ' ಎಂದಿದ್ದಾರೆ.

ಈ ವಾರದ ಆರಂಭದಲ್ಲಿ ಚಿರಾಗ್, ತಮ್ಮ ಪಕ್ಷ ಎಲ್‌ಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಜೊತೆ 'ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ'. ಹಾಗಾಗಿ ಎನ್‌ಡಿಎಯ ಭಾಗವಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಆದರೆ, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ನೆರವಾಗುವುದಾಗಿ ತಿಳಿಸಿದ್ದರು.

ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್(74) ಅವರು ಅಕ್ಟೋಬರ್ 8ರಂದು ನಿಧನರಾಗಿದ್ದರು. ಪಾಸ್ವಾನ್ ಕೆಲವು ದಿನಗಳ ಹಿಂದೆ ಇಲ್ಲಿನ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಅವರು ದೇಶದ ಅತ್ಯಂತ ಪ್ರಸಿದ್ಧ ದಲಿತ ನಾಯಕರಲ್ಲಿ ಒಬ್ಬರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.