ಪಟ್ನಾ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಮತ್ತೆ ಬಿರುಸಿನ ಬೆಳವಣಿಗೆಗಳಾಗುತ್ತಿವೆ. ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಒಮ್ಮತಕ್ಕೆ ಬಾರದಿದ್ದರೆ ಏಕಾಂಗಿಯಾಗಿ ಸ್ಪರ್ಧಿಸಲೂ ಸಿದ್ಧ ಎಂದು ಜೆಡಿಯು ನಾಯಕರೊಬ್ಬರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
‘ಜೆಡಿಯು ಮುಖ್ಯಸ್ಥ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಗೂ ಪ್ರಧಾನಿ ಗಾದಿಯ ಆಕಾಂಕ್ಷಿಯಲ್ಲ. ಹೀಗಾಗಿ ಏಕಾಂಗಿಯಾಗಿ ಸ್ಪರ್ಧಿಸಿದರೂ ಜೆಡಿಯುಗಿಂತ ಬಿಜೆಪಿಗೇ ಹೆಚ್ಚು ನಷ್ಟ’ ಎಂಬ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.
‘ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು 22 ಸ್ಥಾನ ಗಳಿಸಿದ್ದೇವೆ. ಹೀಗಾಗಿ ಅಷ್ಟೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ. ಒಂದೇ ಒಂದು ಸ್ಥಾನವನ್ನೂ ಬಿಟ್ಟುಕೊಡುವ ಮಾತಿಲ್ಲ. ಜೆಡಿಯುಗೆ 10 ಸ್ಥಾನ ನೀಡಬಹುದು’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಮುನಿಸಿಕೊಂಡಿದ್ದ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದರು. ಲಾಲೂ ಪ್ರಸಾದ್ ನೇತೃತ್ವದ ಆರ್‌ಜೆಡಿ ಜತೆ ಕೈಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿದ್ದ ಅವರು ಮತ್ತೆ ಎನ್‌ಡಿಎ ಸೇರಿದ್ದಾರೆ. ಆದರೆ ಇದೀಗ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಎರಡೂ ಪಕ್ಷಗಳ ನಾಯಕರು ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಮೂಲಗಳ ಪ್ರಕಾರ, ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ 20ರಲ್ಲಿ ಬಿಜೆಪಿ, 12ರಲ್ಲಿ ಜೆಡಿಯು, 6ರಲ್ಲಿ ಲೋಕಜನಶಕ್ತಿ ಪಕ್ಷ ಮತ್ತು 2ರಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಸ್ತಾಪವಿದೆ ಎನ್ನಲಾಗಿದೆ.
ಆದರೆ, ಸೀಟು ಹಂಚಿಕೆ ವಿಷಯ ಇನ್ನೂ ನಿರ್ಧಾರವಾಗಿಲ್ಲ ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಮಾತುಕತೆ ಇನ್ನೂ ನಡೆಯುತ್ತಿದೆ. ಹೀಗಿರುವಾಗ ಈ ಅಂಕಿಸಂಖ್ಯೆ ಎಲ್ಲಿಂದ ಬಂತು? ಇದು ನಾವು ಒಪ್ಪುವಂತಹದ್ದಲ್ಲ ಎಂದು ಅವರು ಹೇಳಿದ್ದಾರೆ.
ಬಿಹಾರ, ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಗಳಲ್ಲಿ ಬಿಜೆಪಿಗಾದ ಸೋಲು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಹಿನ್ನಡೆಯು ಹೆಚ್ಚು ಸ್ಥಾನಕ್ಕೆ ಬೇಡಿಕೆ ಇಡುವ ನಿಟ್ಟಿನಲ್ಲಿ ಜೆಡಿಯುಗೆ ಮತ್ತಷ್ಟು ಬಲ ತುಂಬಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ನಮಗೂ ಹೆಚ್ಚು ಸ್ಥಾನ ಬೇಕೆಂದ ರಾಷ್ಟ್ರೀಯ ಲೋಕ ಸಮತಾ ಪಕ್ಷ: ಜೆಡಿಯುಗಿಂತಲೂ ಹೆಚ್ಚು ಸ್ಥಾನವನ್ನು ನೀಡಬೇಕು ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ನೇತೃತ್ವದ ಆರ್‌ಎಲ್‌ಎಸ್‌ಪಿ ಈಗಾಗಲೇ ಆಗ್ರಹಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಪಕ್ಷಕ್ಕಿರುವ ಮೂಲ ಬೆಂಬಲ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸ್ಥಾನ ನೀಡಬೇಕು. ಬಿಹಾರದಲ್ಲಿ ಎನ್‌ಡಿಎ ನಾಯಕನಾಗಿ ನಿತೀಶ್ ಕುಮಾರ್ ಬದಲಿಗೆ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರನ್ನು ಬಿಂಬಿಸಬೇಕು ಎಂದು ಜುಲೈನಲ್ಲೇ ಆರ್‌ಎಲ್‌ಎಸ್‌ಪಿ ಒತ್ತಾಯಿಸಲು ಆರಂಭಿಸಿದೆ.
ಇದನ್ನೂ ಓದಿ...
* ಬಿಹಾರ: ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆಗೆ ಪೈಪೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.