ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸುದ್ದಿಸಂಸ್ಥೆ ‘ಎಎನ್‌ಐ’ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಿತೀಶ್ ಕುಮಾರ್ ಅವರು ಒಂದು ತಿಂಗಳ ಹಿಂದೆ ಬಿಜೆಪಿ ಜೊತೆಗಿದ್ದ ಮೈತ್ರಿತೊರೆದಿದ್ದಾರೆ. ಇದೀಗ ಬಿಜೆಪಿಯನ್ನು ವಿರೋಧಿಸುವ ರಾಜಕೀಯ ನಾಯಕರನ್ನುಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಇದರಿಂದರಾಜಕೀಯ ವಲಯದಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ’ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಅವರ ಮಾತುಗಳನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದುಪ್ರಶಾಂತ್ ಹೇಳಿದ್ದಾರೆ.
2024 ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ಸಾಮೂಹಿಕ ಚಳುವಳಿಗಳನ್ನು ನಡೆಸುವ, ಸಾರ್ವಜನಿಕರಲ್ಲಿ ನಂಬಿಕೆ ಇರುವಂತಹ ವಿಶ್ವಾಸಾರ್ಹ ವ್ಯಕ್ತಿಯ ಅವಶ್ಯಕತೆ ಇದೆ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರೊಂದಿಗಿನ ಅಸಮಾಧಾನದ ಬಗ್ಗೆ ಕೇಳಿದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್, ‘ನಿತೀಶ್ ಜೀ ಅವರು ನನ್ನ ಮೇಲೆ ಕೋಪಗೊಂಡಿಲ್ಲ. ಅವರು ಮಾತನಾಡಿದ ರೀತಿ ಹಾಗೇ ಇತ್ತು ಅಷ್ಟೇ. ನಾನು ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಒಬ್ಬ ‘ಪ್ರಚಾರ ತಜ್ಞ’
ನಿತೀಶ್ ಕುಮಾರ್ ಅವರ ಮೈತ್ರಿ ಬದಲಾಯಿಸುವ ನಿರ್ಧಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ್ದರು. ಈ ಕುರಿತು ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿತೀಶ್ ಕುಮಾರ್, ಪ್ರಶಾಂತ್ ಒಬ್ಬ ‘ಪ್ರಚಾರ ತಜ್ಞ’ ಎಂದು ಲೇವಡಿ ಮಾಡಿದ್ದರು.
ಬಿಹಾರದಲ್ಲಿ ನಮ್ಮ ಸರ್ಕಾರ ಎಷ್ಟು ಕೆಲಸ ಮಾಡಿದೆ ಎಂದು ಅವರಿಗೆ ತಿಳಿದಿದೆಯೇ ಎಂದು ನಿತೀಶ್ ಪ್ರಶ್ನಿಸಿದ್ದರು. ಜತೆಗೆ, ಕಿಶೋರ್ ನೀಡುವ ಹೇಳಿಕೆಗಳಲ್ಲಿ ಅರ್ಥವಿಲ್ಲ. ಅವರು ಬಿಜೆಪಿಗೆ ರಹಸ್ಯವಾಗಿ ಸಹಾಯ ಮಾಡುವ ಕೆಲಸ ಮಾಡುತ್ತಿರಬಹುದು ಎಂದು ನಿತೀಶ್ ಸಂಶಯ ವ್ಯಕ್ತಪಡಿಸಿದ್ದರು.
ರಾಜಕೀಯ ಮುಖಂಡರ ಭೇಟಿ: ವಿರೋಧ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟದ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ನಿತೀಶ್‌ಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್ ರಾವ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.