ಪಟ್ನಾ: ಪ್ರಧಾನಿ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೂಕ್ತ ವ್ಯಕ್ತಿ. ಆದರೆ, ಆಕಾಂಕ್ಷಿಯಲ್ಲ ಎಂದು ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸ್ಪಷ್ಟಪಡಿಸಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ತೊರೆದು ಪ್ರತಿಪಕ್ಷಗಳ ಜತೆಗೂಡಿ ಮಹಾಮೈತ್ರಿ ಸರ್ಕಾರ ರಚಿಸಿದ ಬಳಿಕ, ನಿತೀಶ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ನಿತೀಶ್, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ ಎಂದಿದ್ದರು.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಲಲನ್, ಪ್ರಧಾನ ಮಂತ್ರಿಯಂಥ ಉನ್ನತ ಹುದ್ದೆ ನಿರ್ವಹಿಸಲು ಬೇಕಾದ ಎಲ್ಲ ಗುಣಗಳೂ ನಿತೀಶ್ ಬಳಿ ಇವೆ. ಆದರೆ ಅವರು ಪ್ರಧಾನಿ ಗಾದಿಯ ಆಕಾಂಕ್ಷಿಯಲ್ಲ. ಇದನ್ನು ನಿತೀಶ್ ಅವರೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಅವರು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಹುದ್ದೆಗೆ ನಿತೀಶ್ ಕುಮಾರ್ ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂದು ಬಿಹಾರ ಉಪ ಮುಖ್ಯಮಂತ್ರಿ, ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಲನ್, ‘ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂದಷ್ಟೇ ಅವರು ಹೇಳಿದ್ದಾರೆ. ಅಂದರೆ, ನಿತೀಶ್ ಅವರಲ್ಲಿ ಆ ಹುದ್ದೆಗೆ ತಕ್ಕ ಅರ್ಹತೆ ಇದೆ ಎಂದಷ್ಟೇ. ಅವರು ಆಕಾಂಕ್ಷಿ ಎಂದು ಹೇಳಿಲ್ಲ’ ಎಂದಿದ್ದಾರೆ.
2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿಯೂ ಗೆಲ್ಲಲಿದ್ದಾರಾ? ಎಲ್ಲ ಪ್ರತಿಪಕ್ಷಗಳೂ 2024ರ ವೇಳೆಗೆ ಒಗ್ಗಟ್ಟಾಗಬೇಕೆಂದು ಬಯಸುತ್ತೇನೆ. ನಾನು ಅಂಥ (ಪ್ರಧಾನಿ) ಯಾವುದೇ ಹುದ್ದೆಗಳ ಆಕಾಂಕ್ಷಿಯಲ್ಲ ಎಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಿತೀಶ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.