ಪಾಟ್ನ(ಬಿಹಾರ): ನವದೆಹಲಿಯಲ್ಲಿ ಇಂದು ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಿಲ್ಲ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ತಿಳಿಸಿದರು.
ನಿತೀಶ್ ಕುಮಾರ್ ಬದಲಿಗೆ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಅವರು ಹೇಳಿದರು.
ನಿರ್ಣಾಯಕ ಸಭೆಗೆ ನಿತೀಶ್ ಕುಮಾರ್ ಗೈರುಹಾಜರಾಗಲು ಕಾರಣವೆನೆಂಬ ಬಗ್ಗೆ ಅವರು ಖಚಿತಪಡಿಸಿಲ್ಲ.
‘ನೀತಿ ಆಯೋಗದ ಸಭೆಗೆ ನಿತೀಶ್ ಕುಮಾರ್ ಗೈರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಗೈರಾಗಿದ್ದರು. ಆಗ ಅಂದಿನ ಉಪಮುಖ್ಯಮಂತ್ರಿ ಸಭೆಗೆ ಹಾಜರಾಗಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಈ ಬಾರಿಯೂ ಇಬ್ಬರು ಉಪಮುಖ್ಯಮಂತ್ರಿಗಳು ಸಭೆಗೆ ಹಾಜರಾಗಿದ್ದಾರೆ’ ಎಂದು ನೀರಜ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
‘ಬಿಹಾರದ ನಾಲ್ವರು ಕೇಂದ್ರ ಸಚಿವರು ಆಯೋಗದ ಸದಸ್ಯರಾಗಿದ್ದು, ಅವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆ ಇಂದು (ಶನಿವಾರ) ಆರಂಭವಾಗಿದೆ.
ನೀತಿ ಆಯೋಗದ ಆಡಳಿತ ಮಂಡಳಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವು ಕೇಂದ್ರ ಮಂತ್ರಿಗಳನ್ನು ಒಳಗೊಂಡಿದೆ. ಪ್ರಧಾನಿ ಮೋದಿ ಅವರು ಆಯೋಗದ ಅಧ್ಯಕ್ಷರಾಗಿದ್ದಾರೆ.
ಈ ಸಭೆಯು ವಿಕಸಿತ್ ಭಾರತ್ @2047ರ ಗುರಿಯನ್ನು ಸಾಧಿಸುವಲ್ಲಿ ರಾಜ್ಯಗಳ ಪಾತ್ರದ ಕುರಿತು ವಿವರವಾದ ಚರ್ಚೆಗಳನ್ನು ಮಾಡಲಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.