ಪಟ್ನಾ: ಬಿಹಾರದಲ್ಲಿ ಮೈತ್ರಿಯನ್ನು ಬದಲಿಸಿ, ಮತ್ತೆ ಎನ್‌ಡಿಎ ಜೊತೆ ಕೈಜೋಡಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನೂತನ ಸರ್ಕಾರ ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿತು.
243 ಸದಸ್ಯ ಬಲದ ವಿಧಾನಸಭೆಯಲ್ಲಿ 129 ಸದಸ್ಯರು ವಿಶ್ವಾಸಮತ ನಿರ್ಣಯದ ಪರವಾಗಿ ನಿಂತರು. ಸ್ಪೀಕರ್ ಸ್ಥಾನದಲ್ಲಿದ್ದ ಉಪಾಧ್ಯಕ್ಷ ಮಹೇಶ್ವರ್ ಹಜಾರಿ, ಕಲಾಪ ನಡೆಸಿಕೊಟ್ಟರು. ಹಿಂದೆ ‘ಮಹಾಘಟಬಂಧನ್’ ಸರ್ಕಾರದ ಭಾಗವಾಗಿದ್ದ ಆರ್‌ಜೆಡಿ ಸದಸ್ಯರು ಸಭಾತ್ಯಾಗ ಮಾಡಿದ್ದು, ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.
ಮೊದಲಿಗೆ ವಿಶ್ವಾಸಮತ ನಿರ್ಣಯವು ಧ್ವನಿಮತದಿಂದ ಅಂಗೀಕಾರವಾಗಿದೆ ಎಂದು ಹಜಾರಿ ಪ್ರಕಟಿಸಿದರು. ಆದರೆ, ಸಂಸದೀಯ ವ್ಯವಹಾರಗಳ ಸಚಿವ ವಿಜಯ ಕುಮಾರ್ ಚೌಧರಿ ಅವರು ಸದಸ್ಯರ ತಲೆ ಎಣಿಕೆಗೆ ಮನವಿ ಮಾಡಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಇದನ್ನು ಅನುಮೋದಿಸಿದರು.
129 ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿದರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಸ್ಪೀಕರ್ ಸ್ಥಾನದಲ್ಲಿದ್ದ ಉಪಾಧ್ಯಕ್ಷ, ಜೆಡಿಯುನ ಮಹೇಶ್ವರ್ ಹಜಾರಿ ಮತವನ್ನು ಗಣನೆಗೆ ತೆಗೆದುಕೊಳ್ಳಲು ಸಲಹೆ ಮಾಡಿದರು. ಸಾಮಾನ್ಯವಾಗಿ ಟೈ ಆದ ಸಂದರ್ಭ ಹೊರತುಪಡಿಸಿ ಸ್ಪೀಕರ್ ಸ್ಥಾನದಲ್ಲಿ ಅಸೀನರಾಗಿದ್ದವರ ಮತ ಪರಿಗಣಿಸುವುದಿಲ್ಲ.
ನೂತನ ಸರ್ಕಾರದ ನೇತೃತ್ವ ವಹಿಸಿರುವ ನಿತೀಶ್ ಕುಮಾರ್ ಪರವಾಗಿ ಜೆಡಿಯು, ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಅವರ ಎಚ್ಎಎಂ ಮತ್ತು ಒಬ್ಬ ಪಕ್ಷೇತರ ಸದಸ್ಯ ಇದ್ದಾರೆ. ಇದರ ಜೊತೆಗೆ ಸೋಮವಾರ ಆರ್‌ಜೆಡಿಯ ಮೂವರು ಸದಸ್ಯರು ಆಡಳಿತ ಪಕ್ಷದ ಜೊತೆಗೆ ಕಾಣಿಸಿಕೊಂಡರು.
ಆರ್‌ಜೆಡಿ ಅಕ್ರಮದ ವಿರುದ್ಧ ತನಿಖೆ: ಇದಕ್ಕೂ ಮುನ್ನ ನಿರ್ಣಯವನ್ನು ಮಂಡಿಸಿ ಮಾತನಾಡಿದ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಹಿಂದಿನ ಸರ್ಕಾರದಲ್ಲಿ ಮೈತ್ರಿಯ ಭಾಗವಾಗಿದ್ದ ಆರ್‌ಜೆಡಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದರು.
‘2005ರಲ್ಲಿ ಅಧಿಕಾರದಲ್ಲಿದ್ದ ಆರ್‌ಜೆಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಎನ್‌ಡಿಎ ನೇತೃತ್ವದ ಸರ್ಕಾರ ಈ ಕುರಿತು ತನಿಖೆ ನಡೆಸಲಿದೆ’ ಎಂದು ನಿತೀಶ್ ಕುಮಾರ್ ಸದನದಲ್ಲಿ ಪ್ರಕಟಿಸಿದರು.
‘ಅಲ್ಲದೆ, ಆರ್‌ಜೆಡಿ ಸರ್ಕಾರದ ಅವಧಿಯಲ್ಲಿ ಹಲವು ಕೋಮು ಗಲಭೆಗಳೂ ನಡೆದವು. ಕಾನೂನು ಸುವ್ಯವಸ್ಥೆಯು ಸುಸ್ಥಿತಿಯಲ್ಲಿ ಇರಲಿಲ್ಲ. ಈ ಬಗ್ಗೆಯೂ ತನಿಖೆ ನಡೆಯಲಿದೆ’ ಎಂದು ಹೇಳಿದರು.
ತೇಜಸ್ವಿ ಯಾದವ್ ಟೀಕೆ: ‘ನಿತೀಶ್ ಕುಮಾರ್ ಅವರನ್ನು ತಂದೆಯ ಸ್ಥಾನದಲ್ಲೇ ನೋಡುತ್ತಿದ್ದೆ. ಅವರು ಮತ್ತೆ ಎನ್‌ಡಿಎ ಜೊತೆ ಮೈತ್ರಿ ಹೊಂದಲು ಏನು ಕಾರಣವೊ ತಿಳಿದಿಲ್ಲ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದರು.
ವಿಶ್ವಾಸಮತ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಅವರು ಮುಖ್ಯಮಂತ್ರಿಯಾಗಿ ಒಂಬತ್ತನೇ ಬಾರಿಗೆ, ಐದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಪ್ರಮಾಣ ಸ್ವೀಕರಿಸಿದ್ದಾರೆ ಎಂದು ಟೀಕಿಸಿದರು.
‘ಬಿಹಾರದಲ್ಲಿನ ಮಹಾಘಟಬಂಧನ್ ಸರ್ಕಾರ ಕುರಿತು ಬಿಜೆಪಿಗೆ ಭೀತಿ ಇತ್ತು. ನಿತೀಶ್ ಕುಮಾರ್ ಅವರು ಮತ್ತೆ ತಮ್ಮ ನಿರ್ಧಾರ ಬದಲಿಸುವುದಿಲ್ಲ ಎಂಬ ಗ್ಯಾರಂಟಿಯನ್ನು ಈಗ ಪ್ರಧಾನಿ ನರೇಂದ್ರ ಮೋದಿ ನೀಡುವರೇ’ ಎಂದು ತೇಜಸ್ವಿ ಪ್ರಶ್ನಿಸಿದರು.
ಎನ್‌ಡಿಎ ಸಾಲಿನಲ್ಲಿ ಕಾಣಿಸಿಕೊಂಡ ಆರ್‌ಜೆಡಿಯ ಮೂವರು ಶಾಸಕರು
ಬಿಹಾರದಲ್ಲಿ ಮೈತ್ರಿ ಸರ್ಕಾರದಿಂದ ಹೊರಬಿದ್ದಿರುವ ಆರ್‌ಜೆಡಿಯ ಮೂವರು ಶಾಸಕರು ಸೋಮವಾರ ಅಧಿವೇಶದನದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಅಸೀನರಾಗಿದ್ದರು. ಪಕ್ಷದ ಸದಸ್ಯರಾದ ಚೇತನ್ ಆನಂದ್ ನೀಲಂ ದೇವಿ ಮತ್ತು ಪ್ರಹ್ಲಾದ್ ಯಾದವ್ ಅವರ ಈ ನಡೆಗೆ ಪಕ್ಷದ ನಾಯಕ ತೇಜಸ್ವಿ ಯಾದವ್ ಆಕ್ಷೇಪಿಸಿದ್ದು ಕ್ರಿಯಾಲೋಪವನ್ನು ಎತ್ತಿದರು. ಆದರೆ ಸ್ಪೀಕರ್ ಸ್ಥಾನದಲ್ಲಿದ್ದ ಉಪಾಧ್ಯಕ್ಷ ಮಹೇಶ್ವರ್ ಹಜಾರಿ ಈ ಸಂಬಂಧ ಯಾವುದೇ ರೂಲಿಂಗ್ ನೀಡಲಿಲ್ಲ. ಈ ಮಧ್ಯೆ ಸದನದ ವಿಶ್ವಾಸ ಕೋರುವ ನಿರ್ಣಯವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಡಿಸಿದರು.
ಅವಿಶ್ವಾಸ: ಸ್ಪೀಕರ್ ಪದಚ್ಯುತಿ
ಬಿಹಾರ ವಿಧಾನಸಭೆ ಸ್ಪೀಕರ್ ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ನಿತೀಶ್ ಕುಮಾರ್ ನೇತೃತ್ವದ ನೂತನ ಎನ್‌ಡಿಎ ಸರ್ಕಾರ ವಿಶ್ವಾಸಮತ ಕೋರುವುದಕ್ಕೂ ಮೊದಲು ಈ ಬೆಳವಣಿಗೆ ನಡೆಯಿತು. ಆರ್‌ಜೆಡಿ ಪಕ್ಷ ಅಧಿಕಾರ ಕಳೆದುಕೊಂಡಿದ್ದರೂ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲು ಚೌಧರಿ ನಿರಾಕರಿಸಿದ್ದರು. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. 245 ಸದಸ್ಯ ಬಲದ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪರ 125 ವಿರುದ್ಧವಾಗಿ 112 ಸದಸ್ಯರು ಮತ ಚಲಾಯಿಸಿದರು. ಇದಕ್ಕೂ ಮುನ್ನ ಸಭಾಧ್ಯಕ್ಷ ಪೀಠದಲ್ಲಿದ್ದ ಉಪಾಧ್ಯಕ್ಷ ಮಹೇಶ್ವರ್ ಹಜಾರಿ ಅವರು ನಿರ್ಣಯ ಧ್ವನಿಮತದಿಂದ ಅಂಗೀಕಾರ ಆಗಿದೆ ಎಂದು ಪ್ರಕಟಿಸಲು ಮುಂದಾದರು ಪ್ರತಿಭಟಿಸಿದ ಆರ್‌ಜೆಡಿ ತಲೆಎಣಿಕೆಗೆ ಆಗ್ರಹಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.