ಪಟ್ನಾ: ‘ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮತ್ತೆ ಮರಳುವ ಪ್ರಶ್ನೆಯೇ ಇಲ್ಲ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಿತೀಶ್ ನೇತೃತ್ವದ ಜೆಡಿ(ಯು) ಕಳೆದ ವರ್ಷ ಎನ್‌ಡಿಎ ಕೂಟದ ಮೈತ್ರಿಯನ್ನು ಕಡಿದುಕೊಂಡಿತ್ತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಅವರು ಮುಂಚೂಣಿ ನಾಯಕರಾಗಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಅಸಮಾಧಾನ ಹೊಂದಿರುವ ನಿತೀಶ್ ಮರಳಿ ಎನ್‌ಡಿಎ ತೆಕ್ಕೆಗೆ ಸೇರುತ್ತಾರೆ ಎಂಬ ವದಂತಿ ನಡುವೆಯೇ ಅವರು ಸೋಮವಾರ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ‘ಮತ್ತೆ ಎನ್‌ಡಿಎ ಸೇರುತ್ತೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇಂತಹ ಅಸಂಬದ್ಧ ಪ್ರಶ್ನೆಗಳನ್ನೇಕೆ ಕೇಳುತ್ತೀರಿ’ ಎಂದು ನಿತೀಶ್ ಉತ್ತರಿಸಿದರು.
ಅವಕಾಶ ಇಲ್ಲ: ‘ನಿತೀಶ್ ಎಷ್ಟೇ ಬೇಡಿಕೊಂಡರೂ ಎನ್‌ಡಿಎ ಮೈತ್ರಿಕೂಟಕ್ಕೆ ಅವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ’ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.