ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲು ಕೇಂದ್ರದ ನಿರಾಕರಿಸಿದ್ದರಿಂದ ಮುಜುಗರಕ್ಕೆ ಒಳಗಾಗಿ ನೀತಿ ಆಯೋಗದ ಸಭೆಗೆ ಗೈರಾಗಿದ್ದಾರೆ ಎಂದು ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸಿಪಿಐ (ಎಂಎಲ್) ಲಿಬರೇಷನ್ ಪಕ್ಷ ವ್ಯಂಗ್ಯವಾಡಿದೆ.
‘ನಿತೀಶ್ ಕುಮಾರ್ ಅವರು ನಿರ್ಣಾಯಕ ಸಭೆಯಲ್ಲಿ ಭಾಗವಹಿಸಬೇಕಿತ್ತು. ಅವರು ಮತ್ತೊಮ್ಮೆ ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ’ ಎಂದು ಸಿಪಿಐ (ಎಂಎಲ್) ನಾಯಕ ಮೆಹಬೂಬ್ ಆಲಂ ಲೇವಡಿ ಮಾಡಿದ್ದಾರೆ.
‘ನೀತಿ ಆಯೋಗದ ಸಭೆಗೆ ಗೈರಾಗಿರುವ ಸಿಎಂ ನಿರ್ಧಾರವು ಬಿಹಾರದ ಜನರ ಕಲ್ಯಾಣದ ಬಗ್ಗೆ ಅವರು ಹೊಂದಿರುವ ಕನಿಷ್ಠಮಟ್ಟದ ಕಾಳಜಿಯನ್ನು ತೋರಿಸುತ್ತದೆ’ ಎಂದು ಸಿಪಿಐ(ಎಂಎಲ್) ಶಾಸಕ ಅಜಿತ್ ಕುಮಾರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿ ಜನರನ್ನು ದಾರಿ ತಪ್ಪಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಿಪಿಐ (ಎಂಎಲ್) ನಾಯಕರು ಘೋಷಿಸಿದ್ದಾರೆ.
ಎನ್‌ಡಿಎ ಅಂಗಪಕ್ಷವಾದ ಜೆಡಿಯುನ ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ನಡೆದ ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಬಿಹಾರ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯಕುಮಾರ್ ಸಿನ್ಹಾ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಜಾರ್ಖಂಡ್ ಚುನಾವಣೆ ಕುರಿತು ಚರ್ಚಿಸಲು ಪಟ್ನಾದ ತಮ್ಮ ನಿವಾಸದಲ್ಲಿ ಪಕ್ಷದ ಸಭೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.