ಅಹಮದಾಬಾದ್: ಗುಜರಾತ್‌ನಲ್ಲಿ ಚಂಡೀಪುರ ವೈರಸ್‌ನಿಂದ ಮೃತಪಟ್ಟ ಮೊದಲ ಪ್ರಕರಣವನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ದೃಢಪಡಿಸಿದೆ.
ಶಂಕಿತ ವೈರಾಣುವಿನಿಂದ ಸಾವಿಗೀಡಾದ ಐವರ ಮಾದರಿಗಳನ್ನು ಗುಜರಾತ್‌ನಿಂದ ಕಳುಹಿಸಲಾಗಿತ್ತು. ಈ ಪೈಕಿ 5 ವರ್ಷದ ಮೃತ ಬಾಲಕಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'5 ವರ್ಷದ ಬಾಲಕಿಯು ಚಂಡೀಪುರ ವೈರಸ್‌ನಿಂದ ಮೃತಪಟ್ಟಿರುವುದು ಮಾದರಿ ಪರೀಕ್ಷೆಯಿಂದ ದೃಢವಾಗಿದೆ. ಇದು ಮೊದಲ ಪ್ರಕರಣ ಇದಾಗಿದೆ. ಇನ್ನಷ್ಟು ಮಾದರಿಗಳ ವರದಿಗಾಗಿ ಕಾಯುತ್ತಿದ್ದೇವೆ' ಎಂದು ಹಿಮ್ಮತ್‌ನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪರೇಶ್ ಶಿಲದಾರಿಯಾ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಆರೋಗ್ಯ ಬುಲೆಟಿನ್ ಪ್ರಕಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ತಲಾ ಇಬ್ಬರು ರೋಗಿಗಳು ಶಂಕಿತ ವೈರಸ್‌ನಿಂದ ಮೃತಪಟ್ಟಿದ್ದಾರೆ. ಗುಜರಾತ್‌ನ 14 ಜಿಲ್ಲೆಗಳಲ್ಲಿ ಈವರೆಗೆ ಶಂಕಿತ ಪ್ರಕರಣಗಳು ವರದಿಯಾಗಿವೆ.
ಶಂಕಿತ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈ ಪೈಕಿ 14 ಮಂದಿ ಮೃತಪಟ್ಟಿದ್ದಾರೆ. ನೆರೆಯ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಕೆಲವರೂ ಮೃತಪಟ್ಟಿದ್ದಾರೆ ಎಂದು ಗಾಂಧಿನಗರ ಜಿಲ್ಲೆಯ ಹಿರಿಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಒಂದು ಸಾವು ಸಂಭವಿಸಿರುವುದನ್ನು ಬಿಟ್ಟರೆ, ಉಳಿದೆಲ್ಲವೂ ಶಂಕಿತ ಪ್ರಕರಣಗಳು. ಮಕ್ಕಳ ಸಾವಿನ ಪ್ರಕರಣ ಮತ್ತು ಸೋಂಕು ಹರಡುತ್ತಿರುವ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿ, ಜಾಗೃತಿ ಮೂಡಿಸಲು ತಂಡಗಳನ್ನು ನಿಯೋಜಿಸಿದ್ದೇವೆ. ಆರೋಗ್ಯ ಸಚಿವರೊಂದಿಗೆ ಇಂದು (ಗುರುವಾರ) ಸಭೆ ನಡೆಸಲಿದ್ದೇವೆ' ಎಂದು ಅವರು ವಿವರಿಸಿದ್ದಾರೆ.
ಸಬರ್‌ಕಾಂತ ಜಿಲ್ಲೆಯಲ್ಲಿ 8 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯಾಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.