ADVERTISEMENT

ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಸಿದ್ಧತೆ: ವೈದ್ಯಕೀಯ ಆಯೋಗ

ಪಿಟಿಐ
Published 31 ಅಕ್ಟೋಬರ್ 2023, 16:00 IST
Last Updated 31 ಅಕ್ಟೋಬರ್ 2023, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮುಂದಾಗಿದೆ.

ಭಾರತದಲ್ಲಿ ವೈದ್ಯ ವೃತ್ತಿಯನ್ನು ಕೇಂದ್ರೀಕೃತಗೊಳಿಸುವುದು ಆಯೋಗದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವೈದ್ಯಕೀಯ ನೋಂದಣಿ (ಎನ್‌ಎಂಆರ್‌) ರಚನೆಗೆ ಸಿದ್ಧತೆ ನಡೆಸಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

‘ಮುಂದಿನ ಆರು ತಿಂಗಳಲ್ಲಿ ಈ ಪ್ರಾಯೋಗಿಕ ಯೋಜನೆಗೆ ಚಾಲನೆ ಸಿಗಲಿದೆ. 2024ರ ಅಂತ್ಯದಲ್ಲಿ ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ’ ಎಂದು ಆಯೋಗದ ನೀತಿ ನಿಯಮಗಳ ಮತ್ತು ವೈದ್ಯಕೀಯ ನೋಂದಣಿ ಮಂಡಳಿಯ ಸದಸ್ಯ ಡಾ.ಯೋಗೇಂದ್ರ ಮಲಿಕ್‌ ತಿಳಿಸಿದ್ದಾರೆ.

ADVERTISEMENT

ಹಾಲಿ ಇರುವ ಭಾರತೀಯ ವೈದ್ಯಕೀಯ ನೋಂದಣಿ (ಐಎಂಆರ್‌) ಬದಲಿಗೆ ಎನ್‌ಎಂಆರ್‌ ಅಸ್ತಿತ್ವಕ್ಕೆ ಬರಲಿದೆ. ವೈದ್ಯರಿಗೆ ನೀಡುವ ಯುಐಡಿ, ನೋಂದಣಿ ಸಂಖ್ಯೆ, ಹೆಸರು, ಕೆಲಸ ನಿರ್ವಹಿಸುವ ಸ್ಥಳ, ವಿದ್ಯಾರ್ಹತೆ, ಕಾರ್ಯ ನಿರ್ವಹಿಸುವ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ಸೇರಿದಂತೆ ಅಗತ್ಯ ಮಾಹಿತಿಯು ರಾಷ್ಟ್ರೀಯ ವೈದ್ಯಕೀಯ ನೋಂದಣಿಯಲ್ಲಿ ಇರಲಿವೆ. ಈ ಮಾಹಿತಿಯು ಆಯೋಗದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೂ ಲಭಿಸಲಿದೆ.

‘ಪ್ರಸ್ತುತ ಸುಮಾರು 14 ಲಕ್ಷ ವೈದ್ಯರು ಐಎಂಆರ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರ ಎಲ್ಲಾ ಮಾಹಿತಿಯನ್ನು ಎನ್‌ಎಂಆರ್‌ಗೆ ವರ್ಗಾಯಿಸಲಾಗುತ್ತದೆ. ಹಾಗಾಗಿ, ಆತಂಕಪಡುವ ಅಗತ್ಯವಿಲ್ಲ’ ಎಂದು ಮಲಿಕ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.