ADVERTISEMENT

ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಥಾನಿಕ ವೈದ್ಯರಂತೆ ದುಡಿಯಬೇಕು: NMC

ಪಿಟಿಐ
Published 4 ಜನವರಿ 2024, 16:21 IST
Last Updated 4 ಜನವರಿ 2024, 16:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸ್ನಾತಕೋತ್ತರ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಸ್ಥಾನಿಕ ವೈದ್ಯರಂತೆ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಗುರುವಾರ ಹೊರಡಿಸಿದ ಮಾರ್ಗಸೂಚಿ ನಿಯಮಗಳಲ್ಲಿ ಹೇಳಿದೆ.

ವೈದ್ಯಕೀಯ ಸ್ನಾತಕೋತ್ತರ ನಿಯಮಗಳು–2023 ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ಆಯೋಗವು, ವಿಶ್ರಾಂತಿಗೆ ಅಗತ್ಯವಿರುವ ಸಮಯವನ್ನು ನೀಡಲಾಗುವುದು ಎಂದು ಹೇಳಿದೆ.

ADVERTISEMENT

ವಿದ್ಯಾರ್ಥಿಗಳು ವರ್ಷಕ್ಕೆ 20 ದಿನಗಳ ಸಾಂದರ್ಭಿಕ ರಜೆಗಳನ್ನು ಪಡೆಯಲು ಅರ್ಹರು. ವಾರದಲ್ಲಿ ಒಂದು ರಜೆ ಲಭ್ಯ. ಇದು ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಅನುಕೂಲವಾಗಲಿದೆ. ಈ ಮೊದಲು ರಜೆ ಪಡೆಯಲು ಯಾವುದೇ ಲಿಖಿತ ಅವಕಾಶ ಇರಲಿಲ್ಲ ಎಂದು ಆಯೋಗದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ. ವಿಜಯ್ ಓಜಾ ತಿಳಿಸಿದ್ದಾರೆ.

‘ಒಂದೊಮ್ಮೆ ನೀಡಲಾದ ರಜಾದಿನಗಳಿಗಿಂತ ಹೆಚ್ಚಿನ ರಜೆ ಪಡೆದರೆ, ಅವರ ಕೋರ್ಸ್ ಅವಧಿಯೂ ಅಷ್ಟು ದಿನ ವಿಸ್ತರಣೆಗೊಳ್ಳಲಿದೆ. ಶೇ 80ಕ್ಕಿಂತ ಹೆಚ್ಚಿನ ಹಾಜರಾತಿ ಇದ್ದಲ್ಲಿ ಪರೀಕ್ಷೆ ಬರೆಯಲು ಅರ್ಹರಾಗಲಿದ್ದಾರೆ’ ಎಂದು ನಿಯಮಗಳಲ್ಲಿದೆ.

‘ಹೀಗೆ ಕೆಲಸ ಮಾಡುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ಸೌಕರ್ಯ ಕಲ್ಪಿಸುವುದು ಆಯಾ ಕಾಲೇಜುಗಳ ಜವಾಬ್ದಾರಿ. ಆದರೆ ಅವರು ಹಾಸ್ಟೆಲ್‌ನಲ್ಲಿ ಇರಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ’ ಎಂದು ಹೇಳಲಾಗಿದೆ.

‘ನೂತನ ನೀತಿಯಲ್ಲಿ ವಿದ್ಯಾರ್ಥಿಗಳು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ವರ್ಗಾವಣೆ ಪಡೆಯುವುದನ್ನು ನಿಷೇಧಿಸಿದೆ. ಎಲ್ಲಾ ವಿದ್ಯಾರ್ಥಿಗಳೂ ಸಂಶೋಧನಾ ವಿಧಾನ, ನೀತಿ ಮತ್ತು ಹೃದಯ ಆರೋಗ್ಯದ ನೆರವಿನ ಕೌಶಲಗಳನ್ನು ಕಲಿಯುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಓಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.