ADVERTISEMENT

ಜನಪ್ರತಿನಿಧಿ ಮಾತಿಗೆ ಅಂಕುಶ ಆಗದು: ಸುಪ್ರೀಂ ಕೋರ್ಟ್

ವಾಕ್‌ ಸ್ವಾತಂತ್ರ್ಯಕ್ಕೆ ಹೆಚ್ಚುವರಿ ನಿರ್ಬಂಧ ಹೇರಲಾಗದು: ‘ಸುಪ್ರೀಂ’ ಸಂವಿಧಾನ ಪೀಠದ ತೀರ್ಪು

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 20:36 IST
Last Updated 3 ಜನವರಿ 2023, 20:36 IST
ಬಿ.ವಿ.ನಾಗರತ್ನಾ
ಬಿ.ವಿ.ನಾಗರತ್ನಾ   

ನವದೆಹಲಿ: ಜನಪ್ರತಿನಿಧಿಗಳ ವಾಕ್‌ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಮಂಗಳವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ಕೊಟ್ಟಿದೆ. ವಾಕ್‌ ಸ್ವಾತಂತ್ರ್ಯಕ್ಕೆ ಸಂವಿ ಧಾನದ ವಿಧಿ 19 (2)ರಲ್ಲಿ ಕೆಲವು ಮಿತಿಗಳನ್ನು ಹೇರಲು ಅವಕಾಶವಿದೆ. (ದೇಶದ ಸಾರ್ವಭೌಮತೆ ಮತ್ತು ಒಗ್ಗಟ್ಟು, ಭದ್ರತೆ, ಮಿತ್ರ ದೇಶಗಳ ಸಾರ್ವಭೌಮತೆಗೆ ಧಕ್ಕೆ, ಸಾರ್ವಜನಿಕ ಸುವ್ಯವಸ್ಥೆಗೆ ತೊಡಕು, ಘನತೆ ಅಥವಾ ನೈತಿಕತೆ ಅಥವಾ ನ್ಯಾಯಾಂಗ ನಿಂದನೆ ಮುಂತಾದ ವಿಚಾರಗಳಿಗೆ ಸಂಬಂಧಿಸಿ ಹಕ್ಕುಗಳ ಮೇಲೆ ವಿವೇಚನಾಯುಕ್ತವಾದನಿರ್ಬಂಧಗಳನ್ನು ಹೇರಬಹುದು
ಎಂದು 19 (2) ವಿಧಿಯು ಹೇಳುತ್ತದೆ). ಜನಪ‍್ರತಿನಿಧಿಗಳ ಮೇಲೆ ಕೂಡ ಈ ನಿರ್ಬಂಧವನ್ನಷ್ಟೇ ಹೇರಲುಅವಕಾಶ ಇದೆ ಎಂದು ಪೀಠವು ಸ್ಪಷ್ಟಪಡಿಸಿದೆ.

ಸಚಿವರೊಬ್ಬರು ವ್ಯಕ್ತಿಯ ಹಕ್ಕುಗಳು ಉಲ್ಲಂಘನೆ ಆಗದ ರೀತಿಯಲ್ಲಿ ನೀಡಿದ ಹೇಳಿಕೆಯನ್ನು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗದು. ಆದರೆ, ಆ ಹೇಳಿಕೆಯ ಪರಿಣಾಮವಾಗಿ ಅಧಿಕಾರಿಗಳು ಕೈಗೊಂಡ ಕ್ರಮವು ವ್ಯಕ್ತಿಗೆ ಯಾವುದೇ ನಷ್ಟ/ಹಾನಿ ಮಾಡಿ ದರೆ, ಅದನ್ನು ಅಪರಾಧ ಎಂದು ಪರಿಗಣಿಸಬಹುದು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

ADVERTISEMENT

ಬುಲಂದ್‌ಶಹರ್‌ನ ಹೆದ್ದಾರಿ ಸಮೀಪ 2016ರ ಜುಲೈನಲ್ಲಿ ವ್ಯಕ್ತಿಯೊಬ್ಬರ ಹೆಂಡತಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಈ ತೀರ್ಪು ನೀಡಲಾಗಿದೆ. ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಸಾಮೂಹಿಕ ಅತ್ಯಾಚಾರ ಪ್ರಕರಣವು ‘ರಾಜಕೀಯ ಪಿತೂರಿ’ ಎಂದು ಉತ್ತರ ಪ್ರದೇಶದಲ್ಲಿ ಆಗ ಸಚಿವರಾಗಿದ್ದ ಆಜಂ ಖಾನ್‌ ಹೇಳಿಕೆ ನೀಡಿದ್ದರು. ಆಜಂ ಖಾನ್‌ ಮೇಲೆ ಪ್ರಕಣದ ದಾಖಲಿಸಬೇಕು ಎಂದೂ ವ್ಯಕ್ತಿಯು ಕೋರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ಜನಪ್ರತಿನಿಧಿಗಳ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ನಿರ್ಬಂಧ ಹೇರಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲನೆಗೆ ಒಳಪಡಿಸಿತ್ತು.

ಕಳೆದ ನ. 15ರಂದು ವಿಚಾರಣೆ ಯನ್ನು ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಲಾಗಿತ್ತು. ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಆತ್ಮ ಸಂಯಮ ಪಾಲಿಸಬೇಕು ಮತ್ತು ಇತರರಿಗೆ ಅವಮಾನ ಮತ್ತು ಅಗೌರವ ತರುವ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಪೀಠವು ಆಗ ಹೇಳಿತ್ತು. ಇದು ನಮ್ಮ ಸಾಂವಿಧಾನಿಕ ಸಂಸ್ಕೃತಿಯ ಧೋರಣೆಯಾಗಿದೆ. ಹಾಗಾಗಿ, ಜನಪ್ರತಿ ನಿಧಿಗಳಿಗೆ ನಡತೆ ಸಂಹಿತೆ ರೂಪಿಸುವ ಅಗತ್ಯ ಇಲ್ಲ ಎಂದೂ ಹೇಳಿತ್ತು. ಅರ್ಜಿಯ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳ ಪೀಠವು ಆರಂಭಿಸಿತ್ತು. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಚಿವರು ಅತ್ಯಂತ ಸೂಕ್ಷ್ಮ ವಿಚಾರಗಳ ಕುರಿತು ಹೇಳಿಕೆ ನೀಡಿ, ತಮಗೆ ವಾಕ್‌ ಸ್ವಾತಂತ್ರ್ಯ ಇದೆ ಎಂದು ಹೇಳಿಕೊಳ್ಳಬಹುದೇ ಎಂಬ ಮಹತ್ವದ ವಿಚಾರ ಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದ್ದುದರಿಂದ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿತ್ತು.

‘ಸಚಿವರ ಹೇಳಿಕೆ ಸರ್ಕಾರದ ನಿಲುವಲ್ಲ’

ಸಚಿವರೊಬ್ಬರು ನೀಡಿದ ಹೇಳಿಕೆಯು ಸರ್ಕಾರದ್ದೇ ನಿಲುವು ಎಂದು ಹೇಳಲು ಆಗದು. ಸಾಮೂಹಿಕ ಹೊಣೆಗಾರಿಕೆಯ ತತ್ವವನ್ನು ಅನ್ವಯಿಸುವಾಗಲೂ ಸಚಿವರ ಹೇಳಿಕೆಯು ಸರ್ಕಾರದ ನಿಲುವು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.

ಸರ್ಕಾರವನ್ನು ರಕ್ಷಿಸಲು ಅಥವಾ ಸಮರ್ಥಿಸಲು ಸಚಿವರು ಹೇಳಿಕೆ ನೀಡಿದ್ದರೂ ಸಚಿವರ ಹೇಳಿಕೆಯು ಸರ್ಕಾರದ ನಿಲುವು ಎನ್ನಲಾಗದು ಎಂದು ಪೀಠವು ತಿಳಿಸಿದೆ.

ಆದರೆ, ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದಾರೆ. ಅಗೌರವ ತರುವಂತಹ ಹೇಳಿಕೆಯನ್ನು ಸಚಿವರು ತಮ್ಮ ಹುದ್ದೆಯ ಹೆಸರಿನಲ್ಲಿ ನೀಡಿದ್ದರೆ, ಆಗ ಈ ಹೇಳಿಕೆಯು ಸರ್ಕಾರದ ನಿಲುವು ಕೂಡ ಹೌದು ಎಂದು ಪರಿಗಣಿಸಬಹುದು ಎಂದು ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

ದ್ವೇಷ ಭಾಷಣಗಳು ನಮ್ಮ ಮೂಲಭೂತ ಮೌಲ್ಯಗಳ ಮೇಲೆಯೇ ದಾಳಿ ನಡೆಸುತ್ತವೆ. ಸಮಾಜವನ್ನು ಅಸಮಾನತೆಯತ್ತ ತಳ್ಳುತ್ತವೆ. ಭಾರತದಂತಹ ದೇಶದ ವಿಭಿನ್ನ ಹಿನ್ನೆಲೆಗಳ ಜನರ ಮೇಲೆ ದಾಳಿ ನಡೆಸುತ್ತವೆ ಎಂದು ನಾಗರತ್ನ ಅವರು ಹೇಳಿದ್ದಾರೆ.

ಪೀಠದಲ್ಲಿ ಇದ್ದವರು

ನ್ಯಾಯಮೂರ್ತಿಗಳಾದ ಎಸ್‌. ಅಬ್ದುಲ್ ನಜೀರ್‌, ಬಿ.ಆರ್‌. ಗವಾಯಿ, ಎಸ್‌.ಆರ್‌. ಬೋಪಣ್ಣ, ವಿ. ರಾಮ ಸುಬ್ರಮಣ್ಯನ್‌, ಬಿ.ವಿ.ನಾಗರತ್ನ ಪೀಠದಲ್ಲಿದ್ದರು

ದ್ವೇಷ ಭಾಷಣ ಮಾಡಿದ ಸಚಿವರ ವಿರುದ್ಧ ಪ್ರಧಾನಿ/ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂಬ ವಾದವನ್ನು ತಿರಸ್ಕರಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.