ADVERTISEMENT

ತಮಿಳುನಾಡು ಮದುವೆಗಳಲ್ಲಿನ್ನು ಮದ್ಯ ಸೇವನೆಗೆ ಅವಕಾಶವಿಲ್ಲ!

ಪಿಟಿಐ
Published 24 ಏಪ್ರಿಲ್ 2023, 18:43 IST
Last Updated 24 ಏಪ್ರಿಲ್ 2023, 18:43 IST
   

ಚೆನ್ನೈ: ತಮಿಳುನಾಡು ಮದ್ಯ (ಪರವಾನಗಿ ಮತ್ತು ಅನುಮತಿ) ನೀತಿ 1981ಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿರುವ ತಮಿಳುನಾಡು ಸರ್ಕಾರ, ಮದುವೆ ಸಮಾರಂಭಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲು ನಿರಾಕರಿಸಿದೆ. ಹೀಗಿದ್ದೂ, ಸಂಪೂರ್ಣ ಮದ್ಯ ನಿಷೇಧ ನೀತಿಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಡಿಎಂಕೆ ಹೆಜ್ಜೆ ಇರಿಸಿದೆ ಎಂದು ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿವೆ. 

ದೇಶದ ಇತರ ಭಾಗಗಳಲ್ಲಿಯ ಮದ್ಯ ನೀತಿಗೆ ಅನುಗುಣವಾಗಿ ಮತ್ತು ಅಗತ್ಯಕ್ಕೆ ತಕ್ಕಂತೆ ಐಪಿಎಲ್‌ನಂಥ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳಂಥ ಜಾಗತಿಕ ಮಟ್ಟದ ಸಮಾವೇಶಗಳಲ್ಲಿ ಮದ್ಯ ವಿತರಣೆಗೆ ಅನುವು ಮಾಡುವ ಸಲುವಾಗಿ ನಿಯಮವನ್ನು ಸಡಿಲಿಸಲಾಗಿದೆ ಎಂದು ವಿದ್ಯುತ್‌ ಮತ್ತು ಅಬಕಾರಿ ಸಚಿವ ವಿ. ಸೆಂಥಿಲ್‌ ಬಾಲಾಜಿ ಹೇಳಿದ್ದಾರೆ.

ತಿದ್ದುಪಡಿ ನೀತಿ ಪ್ರಕಾರ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಅಥವಾ ಸಭೆಗಳಲ್ಲಿ ಭಾಗವಹಿಸುವ ಅತಿಥಿಗಳು, ಸಂದರ್ಶಕರಿಗೆ ನೀಡಲು ಮತ್ತು ಅದಕ್ಕಾಗಿ ಮದ್ಯ ಸಂಗ್ರಹಿಸಿಡಲು ವಿಶೇಷ ಪರವಾನಗಿ ತೆಗೆದುಕೊಳ್ಳಬೇಕು. ಉಪ ಆಯುಕ್ತ ಅಥವಾ ಸಹಾಯಕ ಆಯುಕ್ತರು ಪರವಾನಗಿ ಜಾರಿ ಮಾಡುತ್ತಾರೆ. ಅದಕ್ಕೂ ಮೊದಲು ಹಣ ಪಾವತಿಸಿ ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆದಿರಬೇಕು ಎಂದು ಹೇಳಲಾಗಿದೆ. 

ADVERTISEMENT

ತಿದ್ದುಪಡಿಗೆ ವಿರೋಧ:

ಸರ್ಕಾರದ ಈ ನೀತಿಯನ್ನು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ವಿರೋಧಿಸಿದ್ದಾರೆ. ಮದ್ಯದಂಗಡಿಗಳನ್ನು ಮುಚ್ಚುವ ಆಶ್ವಾಸನೆಯೊಂದಿಗೆ ಡಿಎಂಕೆ ಅಧಿಕಾರಕ್ಕೆ ಬಂದಿತು. ಆದರೆ ಈಗ ಮದ್ಯದ ಮಾರಾಟವನ್ನು ಹೆಚ್ಚಿಸುವ ಗುರಿ ಹಾಕಿಕೊಂಡಿದೆ ಎಂದಿದ್ದಾರೆ.

‘ಈ ನೀತಿಯಿಂದಾಗಿ ಮಕ್ಕಳು, ಯುವಕರಲ್ಲಿ ಮದ್ಯಸೇವಿಸಿ ವಾಹನ ಚಾಲನೆ ಮಾಡುವ ಪ್ರವೃತ್ತಿ ಹೆಚ್ಚುತ್ತದೆ’ ಎಂದು ಎಎಂಎಂಕೆಯ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ ದಿನಕರನ್‌ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.