ADVERTISEMENT

ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ

ಪಿಟಿಐ
Published 15 ಮಾರ್ಚ್ 2022, 12:20 IST
Last Updated 15 ಮಾರ್ಚ್ 2022, 12:20 IST
ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ
ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ   

ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯ ಯಾವುದೇ ಫಲಾನುಭವಿಗೆ ಹಣದ ಕೊರತೆಯ ನೆಪವೊಡ್ಡಿ ಚಿಕಿತ್ಸೆ ನಿರಾಕರಿಸಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಕಡಿಮೆ ಅಗತ್ಯತೆ ಅಥವಾ ರಾಜ್ಯಗಳ ಬೇಡಿಕೆಯಿಂದಾಗಿ ಯೋಜನೆಯ ಪರಿಷ್ಕೃತ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್, 2019-20, 2020-21 ಮತ್ತು 2021-22 ರ ಯೋಜನೆಯ ಬಜೆಟ್ ಅಂದಾಜು ಪ್ರತಿ ವರ್ಷ ₹ 6,400 ಕೋಟಿ ಆಗಿತ್ತು. ಇದಕ್ಕೆ ಬದಲಾಗಿ ಪರಿಷ್ಕೃತ ಅಂದಾಜಿನ ಪ್ರಕಾರ, ಕ್ರಮವಾಗಿ ₹ 3,200 ಕೋಟಿ, ₹ 3,100 ಕೋಟಿ ಮತ್ತು ₹ 3,199 ಕೋಟಿ ಮಾಡಲಾಗಿದೆ ಎಂದಿದ್ದಾರೆ.

ಸಾಮಾನ್ಯ ಪ್ರಕ್ರಿಯೆಯ ಪ್ರಕಾರ, ಪರಿಶೀಲನೆ ನಡೆಸಿದ ಬಳಿಕ ನಿಧಿಯ ಬಳಕೆಯನ್ನು ಅವಲಂಬಿಸಿ ಬಜೆಟ್ ಹಂಚಿಕೆಯನ್ನು ಪರಿಷ್ಕರಿಸಲಾಗುತ್ತದೆ. ಅದರಂತೆ, ರಾಜ್ಯಗಳಿಂದ ಕಡಿಮೆ ಅವಶ್ಯಕತೆ ಅಥವಾ ಬೇಡಿಕೆಯಿಂದಾಗಿ, ಪರಿಷ್ಕೃತ ಅಂದಾಜನ್ನು ಕಡಿಮೆ ಮಾಡಲಾಗಿದೆ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ADVERTISEMENT

2022ರ ಮಾರ್ಚ್ 7ರಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ವೇದಿಕೆಗಳಲ್ಲಿನ ವಹಿವಾಟುಗಳು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಂಚಿಕೊಂಡ ಮಾಹಿತಿಗೆ ಸಂಬಂಧಿಸಿದಂತೆ, ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ₹ 30.60 ಕೋಟಿ ಮೌಲ್ಯದ ಸುಮಾರು 8.74 ಲಕ್ಷ ದಾಖಲಾತಿಗಳನ್ನು ಅಧಿಕೃತಗೊಳಿಸಲಾಗಿದೆ.

'ಹಣದ ಕೊರತೆಯಿಂದಾಗಿ ಯೋಜನೆಯ ಯಾವುದೇ ಫಲಾನುಭವಿಗೆ ಚಿಕಿತ್ಸೆಯನ್ನು ನಿರಾಕರಿಸಿಲ್ಲ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.