ADVERTISEMENT

'ನಾನು ಕೇಜ್ರಿವಾಲ್, ರಾಮ–ಲಕ್ಷ್ಮಣ ಇದ್ದಂತೆ' ಎಂದ ಸಿಸೋಡಿಯಾಗೆ ಪೂನವಾಲಾ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2024, 5:43 IST
Last Updated 23 ಸೆಪ್ಟೆಂಬರ್ 2024, 5:43 IST
ಅರವಿಂದ ಕೇಜ್ರಿವಾಲ್‌ ಮತ್ತು ಮನೀಶ್‌ ಸಿಸೋಡಿಯಾ
ಅರವಿಂದ ಕೇಜ್ರಿವಾಲ್‌ ಮತ್ತು ಮನೀಶ್‌ ಸಿಸೋಡಿಯಾ   

ನವದೆಹಲಿ: ತಮ್ಮನ್ನು ಹಾಗೂ ಅರವಿಂದ ಕೇಜ್ರಿವಾಲ್‌ ಅವರನ್ನು ಲಕ್ಷ್ಮಣ ಮತ್ತು ರಾಮನಿಗೆ ಹೋಲಿಕೆ ಮಾಡಿಕೊಂಡಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್‌ ಸಿಸೋಡಿಯಾ ಅವರಿಗೆ ಬಿಜೆಪಿ ನಾಯಕ ಶೇಹಜಾದ್‌ ಪೂನವಾಲಾ ಸೋಮವಾರ ತಿರುಗೇಟು ನೀಡಿದ್ದಾರೆ.

'ಅಬಕಾರಿ ನೀತಿ ಹಗರಣ ನಡೆಸಿರುವ 'ರಾವಣರು' ತಮ್ಮನ್ನು ಹಿಂದೂ ದೇವರುಗಳಿಗೆ ಹೋಲಿಕೆ ಮಾಡಿಕೊಂಡಿದ್ದಾರೆ. ರಾಮ ಮತ್ತು ಲಕ್ಷ್ಮಣರಿಗೆ ಇದಕ್ಕಿಂತ ದೊಡ್ಡ ಅಪಮಾನವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಪ್ರಾಣ ಹೋದರೂ ಮಾತು ತಪ್ಪಬಾರದು ಎಂಬುದು ರಾಮಾಯಣದಿಂದ ಕಲಿಯುವ ಬಹುದೊಡ್ಡ ಪಾಠ. ಆದರೆ, ಅವರು (ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ) ತಾವು ನೀಡಿದ್ದ ಆಶ್ವಾಸನೆಗಳನ್ನು ಪದೇ ಪದೇ ತಪ್ಪಿದ್ದಾರೆ' ಎಂದು ಆರೋಪಿಸಿದ್ದಾರೆ.

ADVERTISEMENT

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾದ ಆರೋಪ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಮೇಲಿದೆ. ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಬಂಧನಕ್ಕೊಳಗಾಗಿದ್ದ ಈ ಇಬ್ಬರೂ ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ತಮ್ಮ ಬಂಧನದ ಕುರಿತು ಮಾತನಾಡಿದ್ದ ಸಿಸೋಡಿಯಾ ಅವರು, ನನ್ನನ್ನು ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಎತ್ತಿಕಟ್ಟಲು ಸಿಬಿಐ ಪ್ರಯತ್ನಿಸಿತ್ತು. ಆದರೆ, ಲಕ್ಷ್ಮಣನನ್ನು ರಾಮನಿಂದ ದೂರ ಮಾಡಲು ಯಾವ ರಾವಣನಿಗೂ ಸಾಧ್ಯವಿಲ್ಲ ಎಂದು ಹೇಳಿದ್ದರು.

ಎಎಪಿಯು ಜಂತರ್‌ ಮಂತರ್‌ನಲ್ಲಿ ಭಾನುವಾರ ಆಯೋಜಿಸಿದ್ದ 'ಜನತಾ ಕಿ ಅದಾಲತ್‌'ನಲ್ಲಿ ಭಾಗವಹಿಸಿದ್ದ ಸಿಸೋಡಿಯಾ, 'ಅವರು (ಸಿಬಿಐ) ನನ್ನನ್ನು ಬೇರೆ ಮಾಡಲು ಪ್ರಯತ್ನಿಸಿದ್ದರು. ಕೇಜ್ರಿವಾಲ್‌ ನನಗೊಂದು ಚೌಕಟ್ಟು ನೀಡಿದ್ದಾರೆ ಎಂದು ಹೇಳಿದ್ದೆ. ಆದರೆ, ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಅವರು ಮನೀಶ್‌ ಸಿಸೋಡಿಯಾ ಹೆಸರು ಹೇಳಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಹಾಗೆಯೇ, ಕೇಜ್ರಿವಾಲ್‌ ಹೆಸರು ಹೇಳಿದರೆ ರಕ್ಷಣೆ ನೀಡುವುದಾಗಿ ನನಗೆ ಆಮಿಷ ಒಡ್ಡಿದ್ದರು' ಎಂದಿದ್ದಾರೆ.

'ರಾಜಕೀಯದಲ್ಲಿ ಯಾರು ಯಾರಿಗೂ ಕೃತಜ್ಞರಾಗಿರುವುದಿಲ್ಲ. ಜೈಲಿನಲ್ಲೇ ನಿನ್ನನ್ನು ಸಾಯಿಸುತ್ತಾರೆ. ಬದಲಾಗುವಂತೆ ಎಂಬುದಾಗಿ ಹೇಳಿದ್ದರು. ನನ್ನ ಬಗ್ಗೆ, ನನ್ನ ಪತ್ನಿ ಹಾಗೂ ಮಗನ ಬಗ್ಗೆ ಯೋಚಿಸುವಂತೆ ಹೇಳಿದ್ದರು. ಆದರೆ ನಾನು, ಲಕ್ಷ್ಮಣನನ್ನು ರಾಮನಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದೀರಿ. ಈ ಜಗತ್ತಿನಲ್ಲಿ ಯಾವ ರಾವಣನಿಗೂ ಅಂತಹ ಶಕ್ತಿ ಇಲ್ಲ. 26 ವರ್ಷಗಳಿಂದ ಕೇಜ್ರಿವಾಲ್‌ ನನಗೆ ಸಹೋದರನಂತೆ ಹಾಗೂ ರಾಜಕೀಯ ಮಾರ್ಗದರ್ಶಕರಾಗಿ ಇದ್ದಾರೆ ಎಂದಿದ್ದೆ' ಎಂದು ಹೇಳಿದ್ದರು.

ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ತಿಹಾರ್‌ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ಕೇಜ್ರಿವಾಲ್‌, ಕಳೆದವಾರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಆತಿಶಿ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.