ADVERTISEMENT

ಯುವಜನರ ಭವಿಷ್ಯ ಹಾಳು ಮಾಡಿದ ಮೋದಿ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 28 ಸೆಪ್ಟೆಂಬರ್ 2024, 13:56 IST
Last Updated 28 ಸೆಪ್ಟೆಂಬರ್ 2024, 13:56 IST
   

ನವದೆಹಲಿ:'ದೇಶದಲ್ಲಿ ನಿರುದ್ಯೋಗಕ್ಕಿಂತ ದೊಡ್ಡ ಸಮಸ್ಯೆ ಯಾವುದೂ ಇಲ್ಲ. ಯಾರ ಉದ್ಯೋಗವನ್ನು ಸರ್ಕಾರ ಕಸಿದಿದೆಯೋ ಅವರಿಂದಲೇ ಬಿಜೆಪಿಗೆ ಸೋಲಾಗಲಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾರ್ಮಿಕರ ಕುರಿತಾದ ಸಮೀಕ್ಷಾ ವರದಿ ಪ್ರಸ್ತಾಪಿಸಿ (ಪಿಎಲ್‌ಎಫ್‌ಎಸ್‌) ‘ಎಕ್ಸ್‌’ನಲ್ಲಿ ಸಂದೇಶವನ್ನು ಪೋಸ್ಟ್‌ ಮಾಡಿರುವ ಖರ್ಗೆ ಅವರು, ‘ಈ ದತ್ತಾಂಶವು ಯುವಜನರ ಸಂಕಷ್ಟವನ್ನು ಬಹಿರಂಗಪಡಿಸಿದೆ. ಯುವಜನರ ಭವಿಷ್ಯ ಹಾಳು ಮಾಡುವುದರಲ್ಲಿ ಮೋದಿ ಅವರ ಕೊಡುಗೆ ಸಾಕಷ್ಟಿದೆ’ ಎಂದು ಹೇಳಿದ್ದಾರೆ.

‘ಯುವಜನರ ನಿರುದ್ಯೋಗ ಪ್ರಮಾಣವು 2023–24ರಲ್ಲಿ ಶೇ 10.2ಕ್ಕೆ ಏರಿಕೆಯಾಗಿರುವುದು ಆತಂಕಕಾರಿಯಲ್ಲವೇ? ವರ್ಣರಂಜಿತ ಘೋಷಣೆ ಮಾಡುವುದು ಹಾಗೂ ಫೋಟೊ ತೆಗೆಸಿಕೊಳ್ಳುವುದರ ಬದಲಿಗೆ ಮೋದಿ ಅವರು ಯುವಜನರಿಗೆ ಉದ್ಯೋಗ ನೀಡಲು ಏನು ಮಾಡಿದ್ದಾರೆ‘ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ನಿಯಮಿತ ವೇತನ ಪಡೆಯುವ ಉದ್ಯೋಗದಲ್ಲಿದ್ದ ಮಹಿಳೆಯರ ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ಶೇ 15.9ಕ್ಕೆ ಇಳಿದಿರುವುದು ಸತ್ಯವಲ್ಲವೇ. ಗ್ರಾಮೀಣ ಭಾಗಗಳಲ್ಲಿ ವೇತನವಿಲ್ಲದ ಉದ್ಯೋಗ ಮಾಡುವ ಮಹಿಳೆಯರ ಪ್ರಮಾಣ ಶೇ 51.9 (2018–18) ರಿಂದ ಶೇ 67.4 (2023–24) ಏರಿಕೆಯಾಗಿರುವುದು ಗ್ರಾಮೀಣ ಭಾಗದ ನಿರುದ್ಯೋಗವನ್ನು ತೋರಿಸುತ್ತಿಲ್ಲವೇ? ಮೋದಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಉದ್ಯೋಗದ ಪ್ರಮಾಣ ಹೆಚ್ಚಿಸಿಲ್ಲವೇಕೆ?’ ಎಂದು ಅವರು ಸಂದೇಶವನ್ನು ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.