ತಿರುವನಂತಪುರ: ಪ್ರವಾಹಪೀಡಿತ ಕೇರಳಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನೀಡಿರುವ ₹25 ಕೋಟಿ ಪರಿಹಾರವನ್ನು ಬಿಜೆಪಿ ಸಂಸದರು ಮತ್ತು ಸಚಿವರು ನೀಡಿದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ ದೇಣಿಗೆ ನೀಡಿದ್ದಾರೆ. ನಾವೇನೂ ಸ್ವೀಕರಿಸಿಲ್ಲ ಅಂತ ಹೇಳಬೇಡಿ’. ಹೀಗೊಂದು ಸಂದೇಶ ಶ್ರೀಕುಮಾರ್ ಶ್ರೀಧರನ್‌ನಾಯರ್ ಎಂಬುವವರ ಫೇಸ್‌ಬುಕ್ ಖಾತೆಯಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ₹25 ಕೋಟಿ ಮೊತ್ತದ ಚೆಕ್ ಸ್ವೀಕರಿಸುತ್ತಿರುವ ಫೋಟೊವೂ ಸಂದೇಶದ ಜತೆಗಿದೆ. ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ಬಿಜೆಪಿ ಸಂಸದ ವಿ. ಮುರಳೀಧರನ್ ಸಹ ಚಿತ್ರದಲ್ಲಿದ್ದಾರೆ. ಈ ಸಂದೇಶವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.
ಬಿಜೆಪಿ ಸಚಿವರು ಕೇರಳಕ್ಕೆ ದೇಣಿಗೆ ನೀಡುತ್ತಿದ್ದಾರೆ ಎಂಬ ಸಂದೇಶದೊಂದಿಗೆ ಅನೇಕ ಜನ ಈ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ₹25 ಕೋಟಿ ಪರಿಹಾರವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಪರವಾಗಿ ಕೇರಳದ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಗಿತ್ತು ಎಂಬುದನ್ನು ಆಲ್ಟ್‌ನ್ಯೂಸ್ ಬಯಲು ಮಾಡಿದೆ.
ದೇಣಿಗೆ ನೀಡಿದ ಬಗ್ಗೆ ಬಿಜೆಪಿ ಸಂಸದ ಮುರಳೀಧರನ್ ಟ್ವೀಟ್ ಮಾಡಿದ್ದು, ತೈಲ ಮಾರುಕಟ್ಟೆ ಕಂಪೆನಿಗಳ ಪರವಾಗಿ ಚೆಕ್ ಹಸ್ತಾಂತರಿಸಲಾಯಿತು ಎಂದು ಉಲ್ಲೇಖಿಸಿದ್ದಾರೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಹ ಪರಿಹಾರ ನೀಡಿದ ಬಗ್ಗೆ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.